ಅತ್ಯಂತ ಜನಪ್ರಿಯ ಕಾರ್ಯಕ್ರಮ 'ಕಾಫಿ ವಿತ್ ಕರಣ್ ಸೀಸನ್ 8' ಪ್ರಾರಂಭವಾಗಿ ಮೂರು ವಾರಗಳು ಪೂರ್ಣಗೊಂಡಿವೆ. ವಾರಕ್ಕಿಬ್ಬರಂತೆ 6 ಮಂದಿ ಈಗಾಗಲೇ ವೇದಿಕೆ ಅಲಂಕರಿಸಿದ್ದಾರೆ. ಬಾಲಿವುಡ್ನ ಪವರ್ಫುಲ್ ಕಪಲ್ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಮೂಲಕ ಗ್ರ್ಯಾಂಡ್ ಓಪನಿಂಗ್ ಪಡೆದಿರುವ ಈ ಚಾಟ್ ಶೋನ ಎರಡನೇ ವಾರದ ಅತಿಥಿಗಳಾಗಿ ಡಿಯೋಲ್ ಬ್ರದರ್ಸ್ ಆಗಮಿಸಿದ್ದರು. ಸನ್ನಿ ಡಿಯೋಲ್, ಬಾಬಿ ಡಿಯೋಲ್ ಬಳಿಕ ಬಾಲಿವುಡ್ ಬೆಡಗಿಯರಾದ ಸಾರಾ ಅಲಿ ಖಾನ್, ಅನನ್ಯಾ ಪಾಂಡೆ ಆಗಮಿಸಿದ್ದಾರೆ. ನಿನ್ನೆಯಷ್ಟೇ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಈ ಶೋ ಹೊರಬಿದ್ದಿದೆ.
ಕಾಫಿ ವಿತ್ ಕರಣ್ ಶೋಗೆ ಸಲ್ಮಾನ್ ಖಾನ್? ಬಾಲಿವುಡ್ನ ಖ್ಯಾತ ನಿರ್ಮಾಪಕ - ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಈ ಪಾಪ್ಯುಲರ್ ಶೋನ ಫಿನಾಲೆಗೆ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಆಹ್ವಾನಿಸುವ ಮೂಲಕ ಹೆಚ್ಚಿನವರ ಗಮನ ಸೆಳೆಯುವ ಗುರಿಯನ್ನು ಹೊಂದಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಸಲ್ಮಾನ್ ಖಾನ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ರೆ, ನಿಸ್ಸಂದೇಹವಾಗಿ ಈ ಚಾಟ್ ಶೋನ ಪ್ರೇಕ್ಷಕರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ.
ಮಾತುಕತೆ ನಡೆಯುತ್ತಿದೆ... ಇತ್ತೀಚಿನ ವರದಿಗಳ ಪ್ರಕಾರ ಕಾಫಿ ವಿಥ್ ಕರಣ್ ಶೋನ ಅಂತಿಮ ಸಂಚಿಕೆಯಲ್ಲಿ, ಸಲ್ಮಾನ್ ಖಾನ್ ಆಗಮನವನ್ನು ಖಚಿತಪಡಿಸಿಕೊಳ್ಳಲು ಚರ್ಚೆಗಳು ನಡೆಯುತ್ತಿವೆಯಂತೆ. ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್ ಸಹ, ಫೈನಲ್ ಎಪಿಸೋಡ್ನಲ್ಲಿ ಯಶಸ್ವಿ ನಟನನ್ನು ಬರಮಾಡಿಕೊಳ್ಳಲು ಬಹಳ ಉತ್ಸುಕರಾಗಿದ್ದಾರೆ. ಈ ಬಗ್ಗೆ ಮಾತುಕತೆ ಮುಂದುವರಿದಿದ್ದು, ಕಾಫಿ ವಿತ್ ಕರಣ್ ತಂಡ ಕಾರ್ಯಕ್ರಮದಲ್ಲಿ ಸಲ್ಮಾನ್ ಜೊತೆ ಇನ್ನೋರ್ವ ಜನಪ್ರಿಯ ನಟನನ್ನು ಕರೆಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಅವಿಸ್ಮರಣೀಯ ಫೈನಲ್ ಎಪಿಸೋಡ್ ನೀಡುವ ಗುರಿಯನ್ನು ತಂಡ ಹೊಂದಿದ್ದು, ಸಲ್ಮಾನ್ ಖಾನ್ ಉಪಸ್ಥಿತಿ ವೇದಿಕೆಯ ಮೆರುಗು ಹೆಚ್ಚಿಸೋದಂತು ಖಚಿತ.