ಕೊಲೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಬುಲೆಟ್ ಪ್ರೂಫ್ ಕಾರು ಖರೀದಿಸಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಹಲವು ಐಷಾರಾಮಿ ಕಾರುಗಳನ್ನು ಹೊಂದಿರುವ ನಟ, ತಮ್ಮ ಪಾರ್ಕಿಂಗ್ ಏರಿಯಾಗೆ ಮತ್ತೊಂದು ಹೊಸ, ಲಕ್ಷುರಿ ಕಾರನ್ನು ತಂದು ನಿಲ್ಲಿಸಿದ್ದಾರೆ. ಕಳೆದ ವಾರಾಂತ್ಯ ಮುಂಬೈನಲ್ಲಿ ನಡೆದ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನಾ ಸಮಾರಂಭಕ್ಕೆ ನಟ ಹೊಸ ಕಾರಿನಲ್ಲೇ ಆಗಮಿಸಿದ್ದರು.
ಕಳೆದ ವರ್ಷ ಕೊಲೆ ಬೆದರಿಕೆಗಳನ್ನು ಸ್ವೀಕರಿಸಿದ ನಂತರ, ಸಲ್ಮಾನ್ ಖಾನ್ ಅವರು ಬುಲೆಟ್ ಪ್ರೂಫ್ ಕಾರುಗಳನ್ನು ಬಳಸುತ್ತಿದ್ದಾರೆ. ಮೊದಲು ಅವರು ಟೊಯೋಟಾ ಲ್ಯಾಂಡ್ ಕ್ರೂಸರ್ LC200 ಬಳಸುತ್ತಿದ್ದರು. ಇದೀಗ ನಿಸ್ಸಾನ್ ಪ್ಯಾಟ್ರೋಲ್ ಎಸ್ಯುವಿ (Nissan Patrol luxury SUV) ಖರೀದಿಸಿದ್ದಾರೆ. ಈ ಮಾದರಿಯು ಭಾರತದಲ್ಲಿ ಮಾರಾಟವಾಗದ ಕಾರಣ ಸಲ್ಮಾನ್ ಈ ಕಾರನ್ನು ಹೊರದೇಶದಿಂದ ಆಮದು ಮಾಡಿಕೊಂಡಿದ್ದಾರೆ. ಸಲ್ಮಾನ್ ಹೊಸದಾಗಿ ಖರೀದಿಸಿದ ಕಾರು ಬುಲೆಟ್ ಪ್ರೂಫಿಂಗ್ ವಿಷಯದಲ್ಲಿ ಅತ್ಯುತ್ತಮವಾಗಿದೆ ಎಂದು ವರದಿಯಾಗಿದೆ. ಈ ನಿಸ್ಸಾನ್ ಕಂಪನಿಯ ಎಸ್ಯುವಿಗಾಗಿ ನಟ ಕೋಟಿ ಕೋಟಿ ಹಣ ಸುರಿದಂತಿದೆ. ಏಕೆಂದರೆ ಖಾಸಗಿಯಾಗಿ ಆಮದು ಮಾಡಿಕೊಂಡರೆ ಬುಲೆಟ್ ಪ್ರೂಫ್ ಇಲ್ಲದೇ ಸುಮಾರು 2 ಕೋಟಿ ರೂ. ಆಗಲಿದೆ. ಇದು ಬುಲೆಟ್ ಪ್ರೂಫ್ ಆಗಿದ್ದು, ಕಾರಿನ ಸಂಪೂರ್ಣ ಮೌಲ್ಯ ತಿಳಿದುಕೊಳ್ಳುವ ಬಗ್ಗೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ.
1998ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್‌ನಿಂದ ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗೆ ಕೊಲೆ ಬೆದರಿಕೆಗಳು ಬಂದಿವೆ. ಕಳೆದ ತಿಂಗಳು, ನಟ ಇ-ಮೇಲ್‌ನಲ್ಲಿ ಹೊಸ ಕೊಲೆ ಬೆದರಿಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಬುಲೆಟ್ ಪ್ರೂಫ್ ಕಾರು ಬಳಸುತ್ತಿದ್ದಾರೆ ಎನ್ನಲಾಗಿದೆ.