ಬಾಲಿವುಡ್ ನಿರ್ಮಾಪಕ ಆನಂದ್ ಪಂಡಿತ್ ಗುರುವಾರ ರಾತ್ರಿ ಮುಂಬೈನಲ್ಲಿ ತಮ್ಮ ಬರ್ತ್ಡೇ ಪಾರ್ಟಿ ಆಯೋಜಿಸಿದ್ದರು. 60ನೇ ಜನ್ಮದಿನವನ್ನು ವಿಶೇಷವಾಗಿ ಅವರು ಆಚರಿಸಿಕೊಂಡರು. ಹಿಂದಿ ಚಿತ್ರರಂಗದ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸಲ್ಮಾನ್ ಖಾನ್, ಶಾರುಖ್ ಖಾನ್, ಅಭಿಷೇಕ್ ಬಚ್ಚನ್, ಅಮಿತಾಭ್ ಬಚ್ಚನ್, ಕಾರ್ತಿಕ್ ಆರ್ಯನ್, ಜಾಕಿ ಶ್ರಾಫ್, ಟೈಗರ್ ಶ್ರಾಫ್, ಹೃತಿಕ್ ರೋಷನ್ ಹಾಗು ನೀಲ್ ನಿತಿನ್ ಮುಖೇಶ್ ಸೇರಿದಂತೆ ಹಲವರು ಕಂಡುಬಂದರು.
ಸೋಷಿಯಲ್ ಮೀಡಿಯಾದಲ್ಲಿ ಸಮಾರಂಭದ ಫೋಟೋ, ವಿಡಿಯೋಗಳು ವೈರಲ್ ಆಗಿವೆ. ನಟ ಸಲ್ಮಾನ್ ಖಾನ್ ಅವರು ಹಿರಿಯ ನಟ ಅಮಿತಾಭ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್ ಅವರನ್ನು ವೇದಿಕೆಯಲ್ಲಿ ಅಪ್ಪಿಕೊಂಡಿರುವ ವಿಡಿಯೋ ಇಂಟರ್ನೆಟ್ನಲ್ಲಿ ಶರವೇಗದಲ್ಲಿ ವೈರಲ್ ಆಗಿದೆ. ಮೂವರಲ್ಲಿ, ಅದರಲ್ಲೂ ವಿಶೇಷವಾಗಿ ಸಲ್ಮಾನ್ ಮತ್ತು ಅಭಿಷೇಕ್ ಅವರನ್ನು ಒಟ್ಟಿಗೆ ನೋಡಿದ ಹಲವರು ಹುಬ್ಬೇರಿಸಿದ್ದಾರೆ.
ತಾರೆಗಳೇ ಸೇರಿದ್ದ ಸಮಾರಂಭ ಇದಾಗಿತ್ತು. ಪ್ರೀತಿಯ ಅಪ್ಪುಗೆ, ಕುಶಲೋಪರಿ ವಿನಿಮಯ ಕಂಡುಬಂತು. ಗುಣಮಟ್ಟದ ಮಾತುಕತೆಯಲ್ಲಿ ತೊಡಗಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅದರಂತೆ ಅಮಿತಾಭ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರನ್ನು ಸಲ್ಮಾನ್ ಅಪ್ಪಿಕೊಂಡು, ಮಾತುಕತೆ ನಡೆಸಿದರು. ಆದರೆ ಈ ಮೂವರ ವಿಡಿಯೋ ಆನ್ಲೈನ್ನಲ್ಲಿ ಕಾಡ್ಗಿಚ್ಚಿನಂತೆ ಹರಡಿ, ನೆಟ್ಟಿಗರಿಂದ ಅಭಿಪ್ರಾಯ ಸ್ವೀಕರಿಸುತ್ತಿದೆ.
ಇದನ್ನೂ ಓದಿ:ಪಠಾಣ್, ಜವಾನ್, ಲಿಯೋ.. 2023ರ ಹಿಟ್ ಸಿನಿಮಾಗಳ ದಾಖಲೆ ಪುಡಿಗಟ್ಟಲಿದೆ 'ಸಲಾರ್'!
ಕೆಲವು ನೆಟ್ಟಿಗರು ನಟಿ ಐಶ್ವರ್ಯಾ ರೈ ಬಚ್ಚನ್ ಅವರನ್ನು ಈ ವಿಚಾರಕ್ಕೆ ಎಳೆದು ತಂದಿದ್ದಾರೆ. ಸಲ್ಮಾನ್ ಖಾನ್ ಅವರೊಂದಿಗೆ ಐಶ್ವರ್ಯಾ ಹೆಸರು ಸದ್ದು ಮಾಡುವುದು ಇಂದು ನಿನ್ನೆಯ ಸಂಗತಿಯಲ್ಲ. ಅವರ ಹಿಂದಿನ ಸಂಬಂಧವನ್ನು ಹೊರಗೆಳೆಯುತ್ತಿರುವ ಟ್ರೋಲಿಗರು ಕಾಮೆಂಟ್ ವಿಭಾಗದಲ್ಲಿ ವ್ಯಂಗ್ಯವಾಡುತ್ತಿದ್ದಾರೆ. ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರೋರ್ವರು, "ಐಶ್ವರ್ಯಾ ಬಂದಿದ್ದರೆ ಚೆನ್ನಾಗಿರುತ್ತಿತ್ತು" ಎಂದಿದ್ದಾರೆ. ಮತ್ತೋರ್ವರು ಕಾಮೆಂಟ್ ಮಾಡಿ, "ಐಶ್ವರ್ಯಾ ಹೇಗಿದ್ದಾರೆ? ಎಂದು ಭಾಯ್ ವಿಚಾರಿಸುತ್ತಿದ್ದಾರೆ'' ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:500 ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಸೇರಿ ಹಲವು ಭಾರತೀಯರು!
ಇನ್ನು ಕೆಲವರು ವಿಡಿಯೋಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಚಪ್ಪಾಳೆಯ ಸಿಂಬಲ್ನೊಂದಿಗೆ ಕಾಮೆಂಟ್ ಮಾಡಿದ ನೆಟ್ಟಿಗರೋರ್ವರು, ''ಎಲ್ಲರಿಗೂ ಶಾಂತಿ ಮತ್ತು ಪ್ರೀತಿ ಬೇಕು. ಪ್ರತಿಯೊಬ್ಬರೂ ಎಲ್ಲವನ್ನೂ ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದು ನನಗೆ ಸಂತೋಷವಾಗಿದೆ'' ಎಂದು ಬರೆದಿದ್ದಾರೆ. ಮತ್ತೋರ್ವರು, "ವಿಶಾಲ ಮನಸ್ಸಿನ ಜನರು ತಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಪರ ಜೀವನವನ್ನು ಪ್ರತ್ಯೇಕಿಸುತ್ತಾರೆ. ಅವರು ವಿಭಿನ್ನ ವಿಧಾನದೊಂದಿಗೆ ಜನರನ್ನು ಭೇಟಿ ಮಾಡುತ್ತಾರೆ. ನಕಲಿ ಜನರು ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ. ಅಭಿಷೇಕ್ ಬಚ್ಚನ್ ಸಲ್ಮಾನ್ ಅವರನ್ನು ತಬ್ಬಿಕೊಳ್ಳುವ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತರೆ ಪುರುಷರು ಅವರಿಂದ ಕಲಿಯಬೇಕು ಎಂದು ಸಲಹೆ ಕೊಟ್ಟಿದ್ದಾರೆ.