ದೇಶಾದ್ಯಂತ ಬೆಳಕಿನ ಹಬ್ಬದ ಸಂಭ್ರಮ ಕಳೆಗಟ್ಟಿದೆ. ದೀಪಾವಳಿ ಹಬ್ಬದ ಉಡುಗೊರೆಯಾಗಿ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಬಹುಬೇಡಿಕೆ ನಟಿ ಕತ್ರಿನಾ ಕೈಫ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಟೈಗರ್ 3' ಬಿಡುಗಡೆ ಆಗಿದೆ. ಮನೀಶ್ ಶರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಅವರು ಸಲ್ಲು ವಿರೋಧಿಯಾಗಿ ಕಾಣಿಸಿಕೊಂಡಿದ್ದಾರೆ. 'ಯಶ್ ರಾಜ್ ಫಿಲ್ಮ್ಸ್' ನಿರ್ಮಾಣದ ಪವರ್ ಪ್ಯಾಕ್ಡ್ ಆ್ಯಕ್ಷನ್ ಮೂವಿ 'ಟೈಗರ್'ನ ಮೂರನೇ ಭಾಗ. ಇಂಡಿಯನ್ ಸೂಪರ್ ಸ್ಟಾರ್ನ ಸಿನಿಮಾವನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಹಲವು ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣವಿದೆ.
ನವೆಂಬರ್ 12, ಭಾನುವಾರ 'ಟೈಗರ್ 3' ತೆರೆಗಪ್ಪಳಿಸಿದೆ. ಈ ಸಿನಿಮಾ ವೀಕ್ಷಿಸಲು ಬಹು ದಿನಗಳಿಂದ ಕಾತರರಾಗಿದ್ದ ಅಭಿಮಾನಿಗಳು ಇಂದು ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಸಿನಿಮಾ ಬಿಡುಗಡೆ ಹಿನ್ನೆಡೆ ಹಲವೆಡೆ ಅದ್ಧೂರಿ ಸೆಲೆಬ್ರೇಷನ್ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ಸೆಲೆಬ್ರೇಷನ್ ವಿಡಿಯೋಗಳು ವೈರಲ್ ಆಗುತ್ತಿವೆ. ಆನ್ಲೈನ್ನಲ್ಲಿ ಕಾಣಿಸಿಕೊಂಡಿರುವ ವಿಡಿಯೋವೊಂದರಲ್ಲಿ ಅಭಿಮಾನಿಗಳು ಒಟ್ಟಿಗೆ ಸೇರಿ ಡೋಲು ಸದ್ದಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಹಿನ್ನೆಲೆಯಲ್ಲಿ, ಸಲ್ಮಾನ್ ಖಾನ್ ಕಟೌಟ್ಗಳು ಕಂಡುಬಂದಿದೆ.
ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಪ್ರೀತಿಯ ಧಾರೆಯೆರೆದರೆ, ಹಲವರು ಸಾಧಾರಣವಾಗಿದೆ ಎಂಬರ್ಥದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಸೊಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ Xನಲ್ಲಿ ಸಿನಿಮಾ ವೀಕ್ಷಿಸಿರುವ ಪ್ರೇಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಬ್ಲಾಕ್ಬಸ್ಟರ್ ಸಿನಿಮಾ ಎಂದು ಕರೆದರೆ, ಕೆಲ ಪ್ರೇಕ್ಷಕರು ಇದನ್ನು ಪಠಾನ್ ಮತ್ತು ಇತರೆ ಸ್ಪೈ ಸಿನಿಮಾಗಳ ನಕಲು ಎಂದು ತಿಳಿಸಿದ್ದಾರೆ.