ಬಾಲಿವುಡ್ ಕಿಂಗ್ ಶಾರುಖ್ ಖಾನ್ ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಸಿನಿಮಾಗಳು ಡಿಸೆಂಬರ್ ಕೊನೆಯಲ್ಲಿ ಬಿಡುಗಡೆ ಆಗಲು ಸಜ್ಜಾಗಿವೆ. ಬಹುನಿರೀಕ್ಷಿತ ಚಿತ್ರಗಳಾದ ಡಂಕಿ ಮತ್ತು ಸಲಾರ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾದಾಗಿನಿಂದಲೂ ಸಿನಿಪ್ರಿಯರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಅಧಿಕೃತ ಬಿಡುಗಡೆ ದಿನಾಂಕ ಘೋಷಣೆ ಆಗಿದ್ದರೂ ಇತ್ತೀಚೆಗೆ ಹಲವು ವದಂತಿ ಹಬ್ಬಿತ್ತು. ಎಸ್ಆರ್ಕೆ ಸಿನಿಮಾವನ್ನು ಮುಂದೂಡಲಾಗುವುದು ಎಂದು ಕೂಡ ಹೇಳಲಾಗಿತ್ತು. ಇದೀಗ ಡಂಕಿ ಮುಂದೂಡಿಕೆ ಆಗಲ್ಲ ಎಂದು ಎಸ್ಆರ್ಕೆ ಟೀಮ್ ತಿಳಿಸಿದೆ. ಜನಪ್ರಿಯ ಸಿನಿಮಾ ವ್ಯವಹಾರ ತಜ್ಞ ತರಣ್ ಆದರ್ಶ್ ಕೂಡ ಸೋಷಿಯಲ್ ಮೀಡಿಯಾದಲ್ಲಿ, ಡಂಕಿ ಸಿನಿಮಾ ಬಿಡುಗಡೆ ಮುಂದೂಡಿಕೆ ಆಗಲ್ಲ ಎಂದು ಬರೆದುಕೊಂಡಿದ್ದಾರೆ.
ಡಿಸೆಂಬರ್ 22ರಂದು ಡಂಕಿ ಬಿಡುಗಡೆ: ಡಂಕಿ ರಿಲೀಸ್ ಡೇಟ್ ಪೋಸ್ಟ್ಪೋನ್ ಆಗಬಹುದು ಎಂದು ಹೇಳಲಾಗಿತ್ತು. ವದಂತಿಗಳ ನಡುವೆ, ಸಿನಿಮಾ 2023ರ ಕ್ರಿಸ್‌ಮಸ್ ಸಂದರ್ಭವೇ ಬಿಡುಗಡೆಯಾಗಲಿದೆ ಎಂಬುದೀಗ ದೃಢಪಟ್ಟಿದೆ. ಶಾರುಖ್ ಖಾನ್ ಅವರ ಟೀಮ್ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಈ ಸುದ್ದಿಯನ್ನು ಖಚಿತಪಡಿಸಿದೆ. ಉದ್ಭವಿಸಿದ ಅಂತೆ ಕಂತೆಗಳಿಗೆ ಕೊನೆ ಹಾಡಿದೆ. ಶಾರುಖ್ ಖಾನ್ ನಟನೆಯ ಮುಂದಿನ ಸಿನಿಮಾ ಈ ಮೊದಲೇ ತಿಳಿಸಿದಂತೆ ಡಿಸೆಂಬರ್ 22ರಂದು ಬಿಡುಗಡೆ ಆಗಲಿದೆ.
ಬಾಕ್ಸ್ ಆಫೀಸ್ ಪೈಪೋಟಿ: ಡಿಸೆಂಬರ್ 22 ರಂದು ಭಾರತೀಯ ಚಿತ್ರರಂಗದ ಇಬ್ಬರು ಸೂಪರ್ ಸ್ಟಾರ್‌ಗಳ ಸಿನಿಮಾಗಳು ಒಟ್ಟಿಗೆ ತೆರೆಕಾಣಲಿವೆ. ದೊಡ್ಡ ಬಾಕ್ಸ್ ಆಫೀಸ್ ಪೈಪೋಟಿ ಏರ್ಪಡಲಿದೆ. ಶಾರುಖ್ ಖಾನ್ ನಟನೆಯ ಡಂಕಿ ಮತ್ತು ಪ್ರಭಾಸ್ ಅಭಿನಯದ ಸಲಾರ್ ಎರಡೂ ಕೂಡ ಈ ವರ್ಷದ ಕ್ರಿಸ್‌ಮಸ್ ಸಂದರ್ಭ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ. ಚಿತ್ರತಂಡ ಕೂಡ ಅಧಿಕೃತ ಬಿಡುಗಡೆ ದಿನಾಂಕ ಘೋಷಿಸಿತ್ತು. ಅದಾಗ್ಯೂ, ಡಂಕಿ ವಿಳಂಬವಾಗಬಹುದು ಎಂಬ ಸುದ್ದಿ ಹರಡಿತ್ತು. ಸಿನಿಮಾ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಅವರ ಟ್ವೀಟ್ ಈ ಸುದ್ದಿಗೆ ಕಾರಣವಾಯಿತು. ಆದ್ರೀಗ ಡಂಕಿ ವಿಳಂಬ ಆಗಲ್ಲ ಎಂಬುದು ಖಚಿತವಾಗಿದೆ.