2023ರ ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಸಲಾರ್ ಮತ್ತು ಡಂಕಿ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಸಿನಿಮಾಗಳ ಸುತ್ತಲಿನ ಉತ್ಸಾಹ ಗರಿಗೆದರಿದೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಡಿಸೆಂಬರ್ 21 ರಂದು ಬಿಡುಗಡೆಯಾಗಲಿದೆ. ಕೆಜಿಎಫ್ ಖ್ಯಾತಿಯ ಸಲಾರ್ ಡಿಸೆಂಬರ್ 22 ರಂದು ತೆರೆಗಪ್ಪಳಿಸಲಿದೆ. ಅದ್ಧೂರಿ ಬಿಡುಗಡೆಗೆ ಎರಡೂ ಚಿತ್ರಗಳು ಸಜ್ಜಾಗಿವೆ. ಸ್ಪರ್ಧೆಯ ಬಿಸಿ ಜೋರಾಗೇ ಇದೆ ಎಂಬುದನ್ನು ಮುಂಗಡ ಟಿಕೆಟ್ ಬುಕಿಂಗ್‌ಗಳು ಸೂಚಿಸುತ್ತಿವೆ. ಈ ಎರಡೂ ಚಿತ್ರಗಳು ಬಲವಾದ ಅಂಕಿ ಅಂಶಗಳನ್ನು ಹೊಂದಿವೆ.
ಡಂಕಿ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಕಲೆಕ್ಷನ್:ಶಾರುಖ್ ಖಾನ್ ಅಭಿನಯದ ಡಂಕಿ ಸಿನಿಮಾ ಹಿಂದಿ ಭಾಷೆಯಲ್ಲಿ ನಿರ್ಮಾಣಗೊಂಡಿದೆ. ಮೊದಲ ದಿನದ ಸಿನಿಮಾ ವೀಕ್ಷಿಸಲು ಸರಿಸುಮಾರು 7.36 ಕೋಟಿ ರೂ.ಗಳ (ಸದ್ಯದ ಮಾಹಿತಿ) ವ್ಯವಹಾರ ನಡೆಸಿದೆ. ಭಾರತದಾದ್ಯಂತ 9,694 ಶೋಗಳಿಗೆ 2,55,796 ಟಿಕೆಟ್‌ಗಳು ಮಾರಾಟವಾಗಿವೆ. ಮೊದಲ ದಿನಗಳಲ್ಲಿ ಉತ್ತಮ ಪ್ರದರ್ಶನ ಕಾಣಲಿರುವ ಭರವಸೆಯನ್ನು 'ಡಂಕಿ 'ನೀಡಿದೆ. ಮತ್ತೊಂದೆಡೆ, ಬಾಕ್ಸ್ ಆಫೀಸ್ನಲ್ಲಿ ಮುಖಾಮುಖಿಯಾಗಲು ಸಜ್ಜಾಗಿರುವ ಸಲಾರ್ ಭಾಗ 1 ತನ್ನ ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ಎಲ್ಲಾ ಭಾಷೆ ಸೇರಿ ಸುಮಾರು 6 ಕೋಟಿ ರೂ. ವ್ಯವಹಾರ ನಡೆಸಿದೆ. ಭಾರತದಾದ್ಯಂತ 4,343 ಶೋಗಳಿಗೆ 2,48,564 ಟಿಕೆಟ್‌ಗಳು ಮಾರಾಟವಾಗಿವೆ. ಈ ಸಿನಿಮಾ ವಿಶೇಷವಾಗಿ ಹಿಂದಿ ಮತ್ತು ತೆಲುಗು ಮಾರುಕಟ್ಟೆಗಳಲ್ಲಿ ಹೆಚ್ಚಿನ ಟಿಕೆಟ್ಗಳನ್ನು ಮಾರಾಟ ಮಾಡಿವೆ.