ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಗೆಲ್ಲಲು ಒಂದೇ ದಿನದ ಅವಧಿಯಲ್ಲಿ 'ಸಲಾರ್' ಮತ್ತು 'ಡಂಕಿ' ಎಂಬೆರಡು ಸಿನಿಮಾಗಳು ತೆರೆಗೆ ಬರುತ್ತಿವೆ. ಭಾರಿ ನಿರೀಕ್ಷೆಗಳ ನಡುವೆ ಬಿಡುಗಡೆಯಾಗುತ್ತಿರುವ ಈ ಚಿತ್ರಗಳಿಗೆ ಭಾರಿ ಹೈಪ್ ಕೂಡಾ ಕ್ರಿಯೇಟ್ ಆಗಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯು ಈಗಾಗಲೇ ದೇಶ, ವಿದೇಶಗಳಲ್ಲಿ ಪ್ರಾರಂಭವಾಗಿವೆ. ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ಮತ್ತು ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ನಟನೆಯ ಚಿತ್ರಗಳ ಟಿಕೆಟ್‌ಗಳು ಶರವೇಗದಲ್ಲಿ ಮಾರಾಟವಾಗುತ್ತಿವೆ.
'ಸಲಾರ್' ಮುಂಗಡ ಬುಕ್ಕಿಂಗ್:ಭಾರತದ ಮುಂಗಡ ಬುಕ್ಕಿಂಗ್ನಲ್ಲಿ 'ಸಲಾರ್' ಈವರೆಗೆ 1.55 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದರಲ್ಲಿ ತೆಲುಗು ಭಾಷೆಯಲ್ಲಿ 1.1 ಕೋಟಿ ರೂ., ಮಲಯಾಳಂನಲ್ಲಿ 35.3 ಲಕ್ಷ ರೂ., ಕನ್ನಡದಲ್ಲಿ 28.3 ಲಕ್ಷ ರೂ., ತಮಿಳಿನಲ್ಲಿ 23.3 ಲಕ್ಷ ರೂಪಾಯಿ ಸಂಗ್ರಹಿಸಲಾಗಿದೆ. ಬಿಡುಗಡೆಯಾಗುವ ಮೊದಲ ದಿನವೇ (ಡಿಸೆಂಬರ್ 22) ಹಿಂದಿಯಲ್ಲಿ 350 ಶೋಗಳಿಗೆ (5.7 ಲಕ್ಷ ರೂ.) 2,303 ಟಿಕೆಟ್ಗಳನ್ನು ಕಾಯ್ದಿರಿಸಲಾಗಿದೆ. ದೇಶಾದ್ಯಂತ ಎಲ್ಲಾ ಭಾಷೆಗಳಲ್ಲಿ ಒಟ್ಟು 75,817 ಟಿಕೆಟ್‌ಗಳು ಮಾರಾಟವಾಗಿವೆ.
ಡಿಸೆಂಬರ್ 17ರಿಂದ ಉತ್ತರ ಭಾರತದಲ್ಲೂ 'ಸಲಾರ್' ಚಿತ್ರದ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಇದನ್ನು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಪ್ರಕಟಿಸಿದೆ. ಇದರೊಂದಿಗೆ ಮುಂಗಡ ಬುಕ್ಕಿಂಗ್ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
'ಡಂಕಿ' ಕಲೆಕ್ಷನ್?:2023ರಲ್ಲಿ ಶಾರುಖ್ ಖಾನ್ ಮೂರನೇ ಬಾರಿಗೆ 'ಡಂಕಿ' ಮೂಲಕ ಥಿಯೇಟರ್‌ಗಳಲ್ಲಿ ಸದ್ದು ಮಾಡಲಿದ್ದಾರೆ. ಈಗಾಗಲೇ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ಕೂಡ ಶುರುವಾಗಿದೆ. ಭಾರತದಲ್ಲಿ 1.44 ಕೋಟಿ ರೂಪಾಯಿ ಸಂಗ್ರಹವಾಗಿದೆ. 'ಡಂಕಿ' ಬಿಡುಗಡೆಯಾಗುವ ಮೊದಲ ದಿನವೇ ಹಿಂದಿಯೊಂದರಲ್ಲೇ 3,126 ಶೋಗಳಿಗೆ 39,954 ಟಿಕೆಟ್‌ಗಳು ಮಾರಾಟವಾಗಿವೆ.