ನಟ ಡಾರ್ಲಿಂಗ್ ಪ್ರಭಾಸ್ ಅಭಿನಯದ 'ಸಲಾರ್' ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಅಡ್ವಾನ್ಸ್ ಬುಕ್ಕಿಂಗ್ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಚಿತ್ರಮಂದಿರಗಳು ಹೌಸ್‌ಫುಲ್ ಆಗಲಿವೆ. ಈಗಾಗಲೇ ರಿಲೀಸ್ ಆಗಿರುವ ಎರಡು ಟ್ರೇಲರ್ಗಳು ಹಾಗೂ ಫಸ್ಟ್ ಸಿಂಗಲ್ ಸಿನಿ ಪ್ರೇಮಿಗಳ ಉತ್ಸಾಹ ಹೆಚ್ಚಿಸಿದೆ. ಆ ಕುತೂಹಲವನ್ನು ನಾಳೆಯವರೆಗೆ ಕಾಯ್ದಿರಿಸಲು ಚಿತ್ರತಂಡ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ. ಮೊದಲ ಹಾಡಿಗಿಂತ ಈ ಹಾಡು ಹೆಚ್ಚು ಭಾವನಾತ್ಮಕವಾಗಿರುವುದರಿಂದ ಸಿನಿ ಪ್ರೇಮಿಗಳು ಬೇಗನೆ ಕನೆಕ್ಟ್ ಆಗಿದ್ದಾರೆ.
ಕನ್ನಡದಲ್ಲಿ 'ಪ್ರತಿಕಥೆಯು', ತೆಲುಗಿನಲ್ಲಿ 'ಪ್ರತಿಕದಲೋ', ಹಿಂದಿಯಲ್ಲಿ 'ಕಿಸ್ಸನ್ ಮೇ', ಮಲಯಾಳಂನಲ್ಲಿ 'ಪ್ರತಿಕಾರಮೋ' ಮತ್ತು ತಮಿಳಿನಲ್ಲಿ 'ಪಲಕದಯಿಲ್' ಎಂಬ ಶೀರ್ಷಿಕೆಯಡಿ ಹಾಡನ್ನು ಅನಾವರಣಗೊಳಿಸಲಾಗಿದೆ. 'ಕೆಜಿಎಫ್' ಸಿನಿಮಾ ಖ್ಯಾತಿಯ ರವಿ ಬಸ್ರೂರು ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ಇದಕ್ಕೂ ಮುನ್ನ 'ಆಕಾಶ ಗಾಡಿಯ' ಎಂಬ ಲಿರಿಕಲ್ ಹಾಡು ಅನಾವರಣಗೊಂಡಿತ್ತು. ಕನ್ನಡ ಆವೃತ್ತಿಯಲ್ಲಿ ಈ ಹಾಡು 1.3 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.
'ಸಲಾರ್' ಅಡ್ವಾನ್ಸ್ ಬುಕ್ಕಿಂಗ್: ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಮೊದಲ ದಿನದ ಶೋಗಳಿಗೆ 14,10,965 ಟಿಕೆಟ್‌ಗಳನ್ನು ಮಾರಾಟ ಮಾಡಿದ್ದು, 29.55 ಕೋಟಿ ರೂ.ಗಳ ವ್ಯವಹಾರ ನಡೆಸಿದೆ. ಇದು ಮೊದಲ ದಿನದ ಆನ್ಲೈನ್ ವ್ಯವಹಾರವಷ್ಟೇ. ಈ ಅಂಕಿ - ಅಂಶ ಏರಿಕೆ ಕಾಣಲಿದೆ. 'ಸಲಾರ್' ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಪ್ರೊಸೆಸ್ ಅನ್ನು ಕೆಲ ದಿನಗಳ ಹಿಂದೆ ತೆರೆಯಲಾಗಿದ್ದು, ಕಲೆಕ್ಷನ್ ಅಂಕಿಅಂಶಗಳು ಉತ್ತಮವಾಗಿರುವಂತೆ ತೋರುತ್ತಿದೆ. ನಾಳೆ ಸಲಾರ್ ಸಿನಿಮಾ ಹಿಂದಿ, ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಭಾರತದಾದ್ಯಂತ 10,472 ಸ್ಕ್ರೀನ್‌ಗಳಲ್ಲಿ ತೆರೆಕಾಣಲಿದೆ.