ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿರುವ ಬಹುನಿರೀಕ್ಷಿತ 'ಸಲಾರ್' ಸಿನಿಮಾ ಕಳೆದ ಶುಕ್ರವಾರದಂದು ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಡಾರ್ಲಿಂಗ್ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ನಟನೆಗೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಈ ಚಿತ್ರದ ಹಾಡುಗಳಿಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಮತ್ತೊಂದು ಹಾಡನ್ನು ಯೂಟ್ಯೂಬ್ನಲ್ಲಿ ರಿಲೀಸ್ ಮಾಡಿದೆ. ಫ್ರೆಂಡ್ಶಿಪ್ ಕುರಿತಾದ ಸಾಂಗ್ ಇದಾಗಿದೆ.
ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹಾಡನ್ನು ಹಂಚಿಕೊಳ್ಳಲು ಸೋಷಿಯಲ್ ಮೀಡಿಯಾವನ್ನು ವೇದಿಕೆಯನ್ನಾಗಿ ಬಳಸಿಕೊಂಡಿತು. ವಿನರಾ (ತೆಲುಗು), ಗೆಳೆಯ (ಕನ್ನಡ), ಯರಾ (ಹಿಂದಿ), ಅರಿವಾಯಿ (ತಮಿಳು), ವರಮಾಯಿ (ಮಲಯಾಳಂ) ಈ ಶೀರ್ಷಿಕೆಗಳೊಂದಿಗೆ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ನಲ್ಲಿ 5 ಭಾಷೆಗಳಲ್ಲಿ ಹಾಡು ಬಿಡುಗಡೆಯಾಗಿದೆ. ಕನ್ನಡ ಭಾಷೆಯಲ್ಲಿ ಈ ಹಾಡು 1 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಪ್ರಭಾಸ್ ಮತ್ತು ಪೃಥ್ವಿರಾಜ್ ನಡುವಿನ ಸ್ನೇಹವನ್ನು ಸಾರುವ ಹಾಡು ಇದಾಗಿದೆ.
ಭಾರತೀಯ ಬಾಕ್ಸ್ ಆಫೀಸ್ ಕಲೆಕ್ಷನ್:ವರದಿಗಳ ಪ್ರಕಾರ 'ಸಲಾರ್' ತೆರೆಕಂಡ ದಿನವೇ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 90.7 ಕೋಟಿ ರೂ. ಗಳಿಸಿದೆ. ಎರಡನೇ ದಿನ 56.35 ಕೋಟಿ ರೂ. ಕಲೆಕ್ಷನ್ ಮಾಡಿದೆ. ಮೂರನೇ ದಿನ 62.05 ಕೋಟಿ ರೂ.ನ ವ್ಯವಹಾರ ನಡೆಸಿದ ಸಿನಿಮಾ ತನ್ನ ನಾಲ್ಕನೇ ದಿನ ಅಂದರೆ ಮೊದಲ ಸೋಮವಾರ 42.50 ಕೋಟಿ ರೂಪಾಯಿಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಈವರೆಗೆ 251.60 ಕೋಟಿ ರೂ. ಸಂಪಾದಿಸಿದೆ.