ಬೆಂಗಳೂರು:ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಹಾಗು ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ 'ಸಲಾರ್' ಸಿನಿಮಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಈ ಸಿನಿಮಾ ಸೆಪ್ಟೆಂಬರ್ 28ರಂದು ರಿಲೀಸ್ ಆಗುತ್ತೆ ಎಂದು ಸಿನಿಮಾ ಪ್ರೇಮಿಗಳು ಭಾರಿ ನಿರೀಕ್ಷೆ ಹೊಂದಿದ್ದರು. ಆದರೆ ಹೊಸ ಬೆಳವಣಿಗೆಯಲ್ಲಿ ಕಾರಣಾಂತರಗಳಿಂದ ಬಿಡುಗಡೆ ಮುಂದೂಡಲಾಗಿದೆ ಎಂದು ನಿರ್ಮಾಪಕ ಸಂಸ್ಥೆ ಹೊಂಬಾಳೆ ಫಿಲಂಸ್ ಸ್ಪಷ್ಟನೆ ನೀಡಿದೆ. ಹೀಗಾಗಿ, ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸುದ್ದಿಯೂ ನಿಜವಾಗಿದೆ.
'ಕೆಲವು ಕಾರಣಗಳಿಂದ ಸಲಾರ್ ಫಸ್ಟ್ ಪಾರ್ಟ್ ಅನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ' ಎಂದು ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹೊಂಬಾಳೆ ಫಿಲಂಸ್ ತಿಳಿಸಿದೆ. ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದಿದೆ.
'ನೀವೆಲ್ಲರೂ ಸಲಾರ್ ಮೇಲೆ ತೋರಿಸುತ್ತಿರುವ ಪ್ರೀತಿಯಿಂದ ತುಂಬಾ ಸಂತೋಷವಾಗುತ್ತಿದೆ. ಕಾರಣಾಂತರಗಳಿಂದ ಸಿನಿಮಾವನ್ನು ಸೆಪ್ಟೆಂಬರ್ 28ಕ್ಕೆ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಅರ್ಥಮಾಡಿಕೊಳ್ಳಿ. ನಿಮಗೆ ಒಳ್ಳೆಯ ಸಿನಿಮಾ ಕೊಡಬೇಕೆಂದು ಈ ನಿರ್ಧಾರ ಕೈಗೊಂಡಿದ್ದೇವೆ. ನಮ್ಮ ಇಡೀ ತಂಡ ನಿಮಗಾಗಿ ದಣಿವರಿಯದೆ ಕೆಲಸ ಮಾಡುತ್ತಿದೆ. ಸದ್ಯ ಚಿತ್ರಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದೇವೆ. ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುತ್ತೇವೆ' ಎಂದು ಹೊಂಬಾಳೆ ಫಿಲಂಸ್ ಪೋಸ್ಟ್ ಮಾಡಿದೆ.