ಪ್ಯಾನ್ ಇಂಡಿಯಾ ಸ್ಟಾರ್ ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಪ್ರಭಾಸ್ ಅಭಿನಯದ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ‘ಸಲಾರ್ ಪಾರ್ಟ್ 1' ಚಿತ್ರದ ಮೊದಲ ಲಿರಿಕಲ್ ಹಾಡು ಬಿಡುಗಡೆಯಾಗಿದೆ. ಹೊಂಬಾಳೆ ಫಿಲಂಸ್ ತನ್ನ ಅಧಿಕೃತ ಎಕ್ಸ್ (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ಬುಧವಾರ ಹಂಚಿಕೊಂಡಿದೆ.
‘ಆಕಾಶ ಗಾಡಿಯ’ ಎಂಬ ಲಿರಿಕಲ್ ಹಾಡು ಇದಾಗಿದ್ದು ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನಲ್‍ನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಮೊದಲ ದಿನವೇ ಈ ಹಾಡಿಗೆ ಸಖತ್ ರೆಸ್ಪಾನ್ಸ್ ಕೂಡ ಸಿಕ್ಕಿದ್ದು ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ ಆಗಿದೆ. ಈ ಹಾಡನ್ನು ಕಿನ್ನಾಲ್ ರಾಜ್ ಬರೆದಿದ್ದು, ವಿಜಯಲಕ್ಷ್ಮೀ ಮೆತ್ತಿನಹೊಳೆ ಕಂಠದಾನ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಇದೊಂದು ಭಾವನಾತ್ಮಕ ಹಾಡಾಗಿದ್ದು, ಇಬ್ಬರು ಗೆಳೆಯರ ನಡುವಿನ ಬಾಂಧವ್ಯವನ್ನು ಸಾರುತ್ತದೆ. ಸ್ನೇಹಿತರ ನಡುವಿನ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಹೂರಣವೇ ಈ ‘ಆಕಾಶ ಗಾಡಿಯ’ ಹಾಡಿನ ಬಹುಮುಖ್ಯ ಕಥಾವಸ್ತು. ಸದ್ಯ ಈ ಲಿರಿಕಲ್ ವಿಡಿಯೋ ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿದೆ.
ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ ಪಡೆದಿರುವ ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರವು ಎರಡು ಗಂಟೆ 55 ನಿಮಿಷಗಳ ಅವಧಿಯನ್ನು ಹೊಂದಿದೆ. ಚಿತ್ರದಲ್ಲಿ ಬೃಹತ್ ಪ್ರಮಾಣ ಆ್ಯಕ್ಷನ್ ದೃಶ್ಯಗಳಿದ್ದು ಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿವೆ. ಅದ್ಧೂರಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರವು ಇದೇ ಡಿಸೆಂಬರ್ 22 ರಂದು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಲಿದೆ.
ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು ಸೇರಿದಂತೆ ಮುಂತಾದವರು ನಟಿಸಿದ್ದು, ಪ್ರಶಾಂತ್ ನೀಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲಂಸ್ನಡಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಭಾರತೀಯ ಸಿನಿ ಲೋಕದ ಬ್ಲಾಕ್ಬಸ್ಟರ್ ಸಿನಿಮಾ 'ಕೆಜಿಎಫ್ -2' ಬಳಿಕ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾ ನಿರ್ದೇಶಕ ಮಾಡಿದ್ದು, ಅದರಷ್ಟೇ ನಿರೀಕ್ಷೆ ಮೂಡಿಸಿದೆ. ಇತ್ತೀಚೆಗಷ್ಟೇ ಸಿನಿಮಾದ ಟ್ರೇಲರ್ ಕೂಡ ರಿಲೀಸ್ ಆಗಿದ್ದು ಎಲ್ಲಾ ಭಾಷೆಗಳ ಟ್ರೇಲರ್ಗೆ ವೀಕ್ಷಕರ ಪ್ರತಿಕ್ರಿಯೆ ಕೂಡ ದೊಡ್ಡ ಮಟ್ಟದಲ್ಲೇ ಲಭಿಸಿದೆ. ಬಿಡುಗಡೆಯಾದ ಕೇವಲ 24 ಗಂಟೆಗಳೊಳಗೆ ಯೂಟ್ಯೂಬ್ನಲ್ಲಿ 116 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದಿದೆ. 'ಕೆಜಿಎಫ್'ನಿಂದಾಗಿ ಹೆಸರುವಾಸಿಯಾಗಿರುವ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿರುವುದರಿಂದ ಮತ್ತು ಬಾಹುಬಲಿ ಖ್ಯಾತಿಯ ಪ್ರಭಾಸ್ ತೆರೆ ಮೇಲೆ ಅಬ್ಬರಿಸಿರುವುದರಿಂದ ಈ ಪ್ರಾಜೆಕ್ಟ್ ಮೇಲಿನ ನಿರೀಕ್ಷೆ, ಉತ್ಸಾಹ, ಕುತೂಹಲ ಬೆಟ್ಟದಷ್ಟಿದೆ.
Yash In Salaar:ಗಾಯಕ ತೀರ್ಥ ಸುಭಾಷ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತ 'ಕೆಜಿಎಫ್' ಸ್ಟಾರ್ ಯಶ್ 'ಸಲಾರ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದರು. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ, ಇತ್ತೀಚೆಗಷ್ಟೇ ಈ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ವದಂತಿಗೆ ತೆರೆ ಎಳೆದಿದ್ದರು. 'ಕೆಜಿಎಫ್ ಸಿನಿಮಾವನ್ನು ಹಲವು ಬಾರಿ ನೋಡಿದ್ದೇನೆ. ಆ ಸಿನಿಮಾದಲ್ಲಿ ಯಶ್ ನಟನೆ ನನಗೆ ಇಷ್ಟ. ನನ್ನ ತಂದೆ ಕೂಡ ಯಾವಾಗಲೂ ಸಂಗೀತದ ಬಗ್ಗೆ ಮಾತನಾಡುತ್ತಾರೆ. ಸಂದರ್ಶನದಲ್ಲಿ ಮಾತನಾಡುವಾಗ ಕೆಜಿಎಫ್ ನೆನಪಾಗಿದ್ದು, ಯಶ್ ಅವರ ಹೆಸರನ್ನು ಹೇಳಿದ್ದು ಅಷ್ಟೇ' ಎಂದು ತೀರ್ಥ ಸುಭಾಷ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
Salaar Remake:ಅದಕ್ಕೂ ಮುನ್ನಸಲಾರ್ ಚಿತ್ರವು ಕೆಜಿಎಫ್ ಸಿನಿಮಾ ಮುಂದುವರೆದ ಭಾಗ ಎಂಬ ವದಂತಿ ಕೂಡ ಹಬ್ಬಿದ್ದು ಈ ಬಗ್ಗೆ ಪ್ರತಿಕ್ರಿಯಿಸಿದ್ದ ನಿರ್ದೇಶಕ ಪ್ರಶಾಂತ್ ನೀಲ್, ಇವೆರಡಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೇ ಸಲಾರ್ ಚಿತ್ರದ ಟ್ರೇಲರ್ ಬಿಡುಗಡೆ ಬಳಿಕ 'ಉಗ್ರಂ' ಚಿತ್ರದ ರೀಮೇಕ್ ಎಂಬುದು ಕೂಡ ಇತ್ತೀಚಿನ ಸುದ್ದಿಯಾಗಿತ್ತು. ಈ ವದಂತಿಗಳಿಗೆ ನಿರ್ಮಾಪಕರು ಪ್ರತಿಕ್ರಿಯಿಸಿದ್ದು ಇದು ಯಾವುದೇ ಸಿನಿಮಾದ ರಿಮೇಕ್ ಅಲ್ಲ ಎಂಬುದನ್ನು ಕೂಡ ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ:'ಸಲಾರ್' ಟ್ರೇಲರ್ ದಾಖಲೆ: 24 ಗಂಟೆಯೊಳಗೆ 116 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ!