ಶಾರುಖ್ ಖಾನ್ ಅವರ ಡಂಕಿ ಚಿತ್ರದ ಬಿಡುಗಡೆ ನಡುವೆಯೂ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಸಲಾರ್: ಭಾಗ 1 ಹಣ ಗಳಿಕೆಯಲ್ಲಿ ಮುನ್ನುಗ್ಗುತ್ತಿದೆ. ಹಳೆಯ ವರ್ಷ ಮತ್ತು ಹೊಸ ವರ್ಷದ ಸದ್ದುಗದ್ದಲದ ನಡುವೆ ವಾರಾಂತ್ಯದಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಶನಿವಾರದ ಗಳಿಕೆಗೆ ಹೋಲಿಸಿದರೆ ಸಲಾರ್ ತನ್ನ ಹತ್ತನೇ ದಿನವಾದ ಭಾನುವಾರದಂದು ಬಾಕ್ಸ್ ಆಫೀಸ್‌ನಲ್ಲಿ 25.42% ಬೆಳವಣಿಗೆ ಕಂಡಿದೆ. ಬ್ಲಾಕ್ ಬಸ್ಟರ್ ಬಾಹುಬಲಿ ಚಿತ್ರದ ಬಳಿಕ ಪ್ರಭಾಸ್ ಚಿತ್ರವೊಂದು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿರುವುದು ವಿಶೇಷ.
ಡಿಸೆಂಬರ್ 21ರಂದು ಶಾರುಖ್ ಖಾನ್ ನಟನೆಯ ಡಂಕಿ ತೆರೆಕಂಡರೆ, ಪ್ರಭಾಸ್ ಅಭಿನಯದ ಸಲಾರ್ ಡಿಸೆಂಬರ್ 22 ಬಿಡುಗಡೆಯಾಗಿತ್ತು. ವರ್ಷಾಂತ್ಯದ ವೇಳೆ ಭಾರಿ ಬಜೆಟ್ನಿಂದ ತೆರೆಕಂಡ ಚಿತ್ರಗಳು ಇವುಗಳಾಗಿದ್ದು ಗಳಿಕೆಯಲ್ಲಿಯೂ ತೀವ್ರ ಪೈಪೋಟಿ ನಡೆಸಿದ್ದವು. ಬಿಡುಗಡೆಗೊಂಡ ಆರಂಭದ ದಿನದಿಂದಲೂ ಉಭಯ ಚಿತ್ರಗಳು ಪೈಪೋಟಿಯಲ್ಲಿಯೇ ಇದ್ದವು. ಆರಂಭಿಕ ಮೂರು ದಿನಗಳ ನಂತರ ಕುಸಿತ ಎದುರಿಸಿದ್ದ ಸಲಾರ್ ಚಿತ್ರ, ಮತ್ತೆ ಥಿಯೇಟರ್ಗಳ ಸಂಖ್ಯೆ ಹೆಚ್ಚಿಸಿಕೊಂಡಿತು. ಶನಿವಾರ 12.55 ಕೋಟಿ ಗಳಿಸಿದ್ದ ಸಲಾರ್, ಭಾನುವಾರ ಸುಮಾರು 15.74 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 346.88 ಕೋಟಿ ರೂಪಾಯಿ ಕಲೆಕ್ಷನ್ ಮಾಡಿಕೊಂಡಂತಾಗಿದೆ. ಕಲೆಕ್ಷನ್ ಅಂಕಿ-ಅಂಶಗಳ ಪ್ರಕಾರ ಅತ್ಯುತ್ತಮ ಎಂದು ಸ್ಯಾಕ್ನಿಲ್ಕ್ ಅಂದಾಜಿಸಿದೆ.
ಪ್ರಭಾಸ್ ಅವರ ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಸಲಾರ್ ಚಿತ್ರ ಗಲ್ಲಾಪೆಟ್ಟಿಯಲ್ಲಿ ದಾಖಲೆ ಬರೆದಿದೆ. ವಿಶುವಲ್ ಎಫೆಕ್ಟ್ ಮತ್ತು ಡೈಲಾಗ್ಗಳ ವಿವಾದಗಳಿಂದ ಸದ್ದು ಮಾಡಿದ್ದ ಅವರ ನಟನೆಯ 'ಆದಿಪುರುಷ' ಚಿತ್ರ ಭಾರತದಲ್ಲಿ 288.15 ಕೋಟಿ ಹಣ ಗಳಿಸಿತ್ತು. ಅದಕ್ಕೂ ಮುನ್ನ ತೆರೆ ಕಂಡ ರಾಧೆ ಶ್ಯಾಮ್, ಸಾಹೋ, ಬಾಹುಬಲಿ 2 - ದಿ ಕನ್‌ಕ್ಲೂಷನ್, ಬಾಹುಬಲಿ - ದಿ ಬಿಗಿನಿಂಗ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸದ್ದು ಮಾಡಿದ್ದವು.
- ರಾಧೆ ಶ್ಯಾಮ್ - ಭಾರತದಲ್ಲಿ 123.2 ಕೋಟಿ ಗಳಿಸಿದ್ದರೆ, ಜಾಗತಿಕವಾಗಿ 149.5 ಕೋಟಿ ರೂ. ಗಳಿಸಿತ್ತು.
- ಸಾಹೋ - ಭಾರತದಲ್ಲಿ ರೂ. 359 ಕೋಟಿ ಬಾಚಿದ್ದರೆ, ಜಾಗತಿಕವಾಗಿ ರೂ. 451 ಕೋಟಿ ಗಳಿಸಿತ್ತು.
- ಬಾಹುಬಲಿ 2: ದಿ ಕನ್‌ಕ್ಲೂಷನ್ ಭಾರತದಲ್ಲಿ 1,416.9 ಕೋಟಿ ಸಂಗ್ರಹ ಮಾಡಿದ್ದರೆ, ರೂ. 1788.06 ಕೋಟಿ ಜಾಗತಿಕವಾಗಿ ಗಲ್ಲಾಪೆಟ್ಟಿಗೆ ತುಂಬಿಸಿಕೊಂಡಿತ್ತು.
- ಬಾಹುಬಲಿ: ದಿ ಬಿಗಿನಿಂಗ್ - ರೂ. 516.00 ಕೋಟಿ ಭಾರತದಲ್ಲಿ ಗಳಿಸಿದ್ದರೆ, ಜಾಗತಿಕವಾಗಿ ಒಟ್ಟು 134.00 ಕೋಟಿ ರೂ. ತನ್ನದಾಗಿಸಿಕೊಂಡಿತ್ತು.