ಹೈದರಾಬಾದ್: ’ಸಲಾರ್: ಸೀಸ್ ಫೈರ್ - ಭಾಗ 1 ತನ್ನ ಮೂರನೇ ದಿನವೂ ಗಲ್ಲಾಪೆಟ್ಟಿಗೆಯಲ್ಲಿ ಪ್ರಾಬಲ್ಯ ಸಾಧಿಸುತ್ತಲೇ ಇದೆ. ಇದು ದೇಶಾದ್ಯಂತದ ಸಿನಿಪ್ರೇಮಿಗಳಲ್ಲಿ ಉತ್ಸಾಹ ಮತ್ತು ನಿರೀಕ್ಷೆಯನ್ನು ಹುಟ್ಟುಹಾಕಿದೆ. Sacnilk ಪ್ರಕಾರ, ಸೂಪರ್‌ಸ್ಟಾರ್ ಪ್ರಭಾಸ್ ಮತ್ತು ಬ್ಲಾಕ್‌ಬಸ್ಟರ್ ಕೆಜಿಎಫ್ ಸರಣಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರ ಇತ್ತೀಚಿನ ಪ್ರಯತ್ನ ಸಲಾರ್ ಮೂರನೇ ದಿನದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಸಲಾರ್ ಚಿತ್ರ ಭಾರತದಲ್ಲಿ ಮಾತ್ರ ಬರೋಬ್ಬರಿ 200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ಚಿತ್ರದ ಒಂದನೇ ದಿನ ಮತ್ತು 2 ನೇ ದಿನದ ಕಲೆಕ್ಷನ್ ಅಂದಾಜುಗಳನ್ನು ಮೀರಿದೆ. ವಿಶೇಷವಾಗಿ ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ಈ ಚಿತ್ರಕ್ಕೆ ಪ್ರೇಕ್ಷಕರು ಕುಣಿದು ಕುಪ್ಪಳಿಸುತ್ತಿದ್ದಾರೆ. ಅತ್ಯುತ್ತಮ ಪ್ರತಿಕ್ರಿಯೆಯಿಂದ ಮುಂಗಡ ಬುಕಿಂಗ್ ಸಂಖ್ಯೆ ಇನ್ನಷ್ಟು ಹೆಚ್ಚಿಸಿದೆ. ಸಲಾರ್ ಅವರ ಅಧಿಕೃತ ಟ್ವಿಟ್ಟರ್ ಖಾತೆಯು ಚಿತ್ರದ ಇತ್ತೀಚಿನ ಜಾಗತಿಕ ಗಳಿಕೆಯನ್ನು ವರದಿ ಮಾಡಿದೆ. ಇದು ಒಟ್ಟು 295 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ.
ಇತ್ತೀಚೆಗೆ 'ಸಲಾರ್' ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್ನಲ್ಲಿ ಜಾಗತಿಕ ಕಲೆಕ್ಷನ್ನ ಅಪ್ಡೇಟ್ಸ್ ನೀಡಿತ್ತು. ಶೇರ್ ಮಾಡಲಾಗಿರುವ ಈ ಪೋಸ್ಟ್ನಲ್ಲಿ, ವಿಶ್ವಾದ್ಯಂತ 295.7 ಕೋಟಿ ರೂಪಾಯಿ ಗಳಿಸಿರುವುದಾಗಿ ಬಹಿರಂಗಪಡಿಸಿತ್ತು. ಚಿತ್ರವು ಡಿಸೆಂಬರ್ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಸೂಪರ್ ಕಲೆಕ್ಷನ್‌ಗಳೊಂದಿಗೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದು 2023 ರಲ್ಲಿ ಅತಿ ಹೆಚ್ಚು ಆರಂಭಿಕ ದಿನದ ಕಲೆಕ್ಷನ್‌ಗಳೊಂದಿಗೆ ಭಾರತೀಯ ಚಲನಚಿತ್ರವಾಗಿದೆ.
'ಬಾಹುಬಲಿ 2' ಸಿನಿಮಾ ಮೂಲಕ ಭಾರತದಾದ್ಯಂತ ಭಾರಿ ಹವಾ ಎಬ್ಬಿಸಿದ್ದ ನಟ ಪ್ರಭಾಸ್ ಅವರ ಈ ಹಿಂದಿನ ಕೆಲವು ಸಿನಿಮಾಗಳು ಹೇಳಿಕೊಳ್ಳುವ ಗೆಲುವು ಕಾಣಲಿಲ್ಲ. ಆದರೀಗ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ತೆರೆಗೆ ಬಂದಿರುವ 'ಸಲಾರ್' ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಸಿನಿಪ್ರಿಯರ ನಿರೀಕ್ಷೆ ತಲುಪುವಲ್ಲಿ ಸಿನಿಮಾ ಯಶಸ್ವಿಯಾಗಿದೆ. ತೆರೆಗೆ ಬಂದ ಮೂರೇ ದಿನಗಳಲ್ಲಿ ದೇಶ್ಯಾದ್ಯಂತ 200 ಕೋಟಿ ರೂ.ಗೂ ಹೆಚ್ಚು ಹಣ ಗಳಿಸಿದೆ ಎಂದು Sacnilk ವೆಬ್ಸೈಟ್ ವರದಿ ಪ್ರಕಾರ ತಿಳಿದು ಬಂದಿದೆ.
ಮೂರು ದಿನಗಳಲ್ಲಿ ಚಿತ್ರ ರೂ. 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನುತ್ತವೆ ಟ್ರೇಡ್ ಮೂಲಗಳು. ಇನ್ನೊಂದು ದಿನದಲ್ಲಿ ಈ ಸಿನಿಮಾ ರೂ.500 ಕೋಟಿ ಕ್ಲಬ್ ತಲುಪುವ ನಿರೀಕ್ಷೆ ಇದೆ. ಸೋಮವಾರ ಕ್ರಿಸ್‌ಮಸ್ ರಜೆ ಹಾಗೂ ಮಂಗಳವಾರ ಅರ್ಧ ದಿನ ಇರುವುದರಿಂದ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎನ್ನುತ್ತವೆ ಮೂಲಗಳು. ವಿಶ್ವಾದ್ಯಂತ ಮೊದಲ ದಿನ ರೂ.176 ಕೋಟಿ ಹಾಗೂ ಎರಡನೇ ದಿನ ರೂ.119 ಕೋಟಿ ಕಲೆಕ್ಷನ್ ಮಾಡಿದೆ ಎಂದು ಚಿತ್ರ ಅಧಿಕೃತವಾಗಿ ಘೋಷಿಸಿದೆ.
ಪ್ರಶಾಂತ್ ನೀಲ್ ಅವರ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಆತ್ಮೀಯ ಸ್ನೇಹಿತರು ಹೇಗೆ ಕಡು ಶತ್ರುಗಳಾಗಿ ಬದಲಾದರು ಎಂಬುದರ ಸುತ್ತ ಈ ಸಿನಿಮಾ ಸುತ್ತುತ್ತದೆ. ಈ ಚಿತ್ರದಲ್ಲಿ ಶ್ರುತಿ ಹಾಸನ್, ಈಶ್ವರಿ ರಾವ್, ಜಗಪತಿ ಬಾಬು, ಶ್ರೀಯಾ ರೆಡ್ಡಿ, ಬಾಬಿ ಸಿಂಹ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿ ನಿರ್ಮಾಪಕ ವಿಜಯ್ ಕಿರಂಗದೂರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಶುಕ್ರವಾರ ಬಿಡುಗಡೆಯಾದ ಚಿತ್ರವು ಶಾರುಖ್ ಖಾನ್ ಅವರ ಡಂಕಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.
ಓದಿ:2 ದಿನ, ₹300 ಕೋಟಿ! ಪಠಾಣ್, ಜವಾನ್ ದಾಖಲೆ ಮುರಿದ 'ಸಲಾರ್'