ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ಅಭಿನಯದ 'ಸಲಾರ್' ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ್ದು ನಿಮಗೇ ತಿಳಿದೇ ಇದೆ. ಆದ್ರೀಗ ಬಾಕ್ಸ್ ಆಫೀಸ್ ಅಂಕಿ ಅಂಶದಲ್ಲಿ ಕೊಂಚ ಕುಸಿತ ಕಂಡಿದೆ. ಆ್ಯಕ್ಷನ್ ಪ್ಯಾಕ್ಡ್ ಡ್ರಾಮಾದ ಗಳಿಕೆ ಈ ವಾರದಲ್ಲಿ ಇಳಿಮುಖವಾಗಿದೆ. ಅದಾಗ್ಯೂ ಇಂದು ಮತ್ತು ನಾಳೆ ಸಿನಿಮಾದ ಸಂಪಾದನೆ ಉತ್ತಮವಾಗಿರಲಿದೆ ಎಂದು ಅಂದಾಜಿಸಲಾಗಿದೆ. ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಈವರೆಗೆ 550 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಇಳಿಕೆಯತ್ತ ಗಳಿಕೆ: ಸಿನಿಮಾ ತೆರೆಕಂಡ ಬಳಿಕ ಎರಡನೇ ಶುಕ್ರವಾರ ಗಳಿಕೆಯಲ್ಲಿ ಇಳಿಕೆಯಾಗಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಸಿನಿಮಾದ ಗಳಿಕೆ ಗುರುವಾರದಿಂದ ತೀರಾ ಸಾಧಾರಣವಾಗಿದೆ. ಶಾರುಖ್ ಖಾನ್ ಅಭಿನಯದ ಡಂಕಿ ಸಿನಿಮಾಗಿಂತಲೂ ಸಲಾರ್ ಅತ್ಯುತ್ತಮ ಪ್ರದರ್ಶನ ಕಂಡಿದೆ. ಹುಬ್ಬೇರಿಸುವ ಅಂಕಿ ಅಂಶಗಳೊಂದಿಗೆ ಆರಂಭ ಕಂಡರೂ ಕಳೆದ ಮೂರ್ನಾಲ್ಕು ದಿನದ ಕಲೆಕ್ಷನ್ ತೀರಾ ಸಾಧಾರಣವಾಗಿದೆ.
'ಸಲಾರ್' ಚಿತ್ರಮಂದಿರಗಳಲ್ಲಿ ಈಗಾಗಲೇ ಎಂಟು ದಿನಗಳ ಪ್ರದರ್ಶನ ಕಂಡಿದ್ದು, ಒಂಭತ್ತನೇ ದಿನದ ಸ್ಕ್ರೀನಿಂಗ್ ನಡೆಯುತ್ತಿದೆ. ಎಂಟು ದಿನಗಳಲ್ಲಿ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಒಟ್ಟು 318 ಕೋಟಿ ರೂಪಾಯಿ ಸಂಪಾದಿಸುವಲ್ಲಿ ಯಶ ಕಂಡಿದೆ. ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಸಿನಿಮಾ ತನ್ನ ಎರಡನೇ ಶುಕ್ರವಾರದಂದು 10 ಕೋಟಿ ರೂಪಾಯಿ ಸಂಪಾದಿಸಿದೆ. ಗುರುವಾರದ ಗಳಿಕೆ 12.1 ಕೋಟಿ ರೂ. ಆಗಿದೆ.