ಹೈದ್ರಾಬಾದ್:ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಸಲಾರ್: ಭಾಗ 1- ಸೀಸ್ಫೈರ್' ಇಂದು ಬಿಡುಗಡೆಯಾಗಿದೆ. 'ರಾಧೆ-ಶ್ಯಾಮ್', 'ಆದಿಪುರುಷ್' ಸಿನಿಮಾಗಳ ಸೋಲಿನಿಂದ ನಿರಾಶೆ ಅನುಭವಿಸಿದ್ದ ಪ್ರಭಾಸ್ ಇದೀಗ ಆ್ಯಕ್ಷನ್ ಸಿನಿಮಾ ಮೂಲಕ ಪ್ರೇಕ್ಷಕರೆದುರು ಮರಳಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಅದ್ಧೂರಿಯಾಗಿ ತೆರೆಕಂಡಿದೆ. ಸ್ಯಾಕ್ನಿಲ್ಕ್ ಲೆಕ್ಕಾಚಾರದಂತೆ, ಮೊದಲ ದಿನ ಭಾರತದಲ್ಲಿ ಸುಮಾರು 100 ಕೋಟಿ ರೂಪಾಯಿ ಸಂಪಾದಿಸುವ ನಿರೀಕ್ಷೆ ಇದೆ.
ಎರಡು ವರ್ಷ ಸಮಯ ತೆಗೆದುಕೊಂಡು ನಿರ್ಮಿಸಲಾಗಿದ್ದ 'ಸಲಾರ್' ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಹೊಂಬಾಳೆ ಬಂಡವಾಳ ಹೂಡಿದೆ. ಇತ್ತೀಚಿನ ವರ್ಷದಲ್ಲಿ ಅತ್ಯಂತ ಹೆಚ್ಚು ಬಾಕ್ಸ್ ಆಫೀಸ್ ಆನ್ಲೈನ್ ಬುಕ್ಕಿಂಗ್ ಕಂಡ ಚಿತ್ರಗಳಲ್ಲಿ ಸಲಾರ್ ಪ್ರಮುಖವಾಗಿದ್ದು, ಭಾರತದಲ್ಲಿ 42 ಕೋಟಿ ರೂ ಆನ್ಲೈನ್ ಬುಕ್ಕಿಂಗ್ ಮಾಡಿಕೊಂಡಿದೆ.
ಆನ್ಲೈನ್ ಮತ್ತು ಆಫ್ಲೈನ್ ಟಿಕೆಟ್ ಮಾರಾಟವನ್ನು ಗಣನೆಗೆ ತೆಗೆದುಕೊಂಡರೆ ಎಲ್ಲಾ ಭಾಷೆಗಳಲ್ಲಿ 'ಸಲಾರ್' ಬಿಡುಗಡೆಯ ದಿನ 100 ಕೋಟಿ ರೂ ಸಂಪಾದಿಸಲಿದೆ. ಇದರಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಕೊಡುಗೆ ಹೆಚ್ಚು. ಈ ಎರಡೂ ರಾಜ್ಯಗಳಿಂದ 70 ಕೋಟಿ ರೂ ಹರಿದು ಬರಲಿದೆ. ಸಿನಿಮಾದ ಒಟ್ಟು ಯಶಸ್ಸಿನಲ್ಲಿ ಹಿಂದಿ ಚಿತ್ರ ಮಾರುಕಟ್ಟೆ ಕೂಡ ನಿರ್ಣಾಯಕ ಪಾತ್ರವಹಿಸಲಿದೆ. ಬುಕ್ಕಿಂಗ್ ಲೆಕ್ಕಾಚಾರದಂತೆ ಹಿಂದಿಯಿಂದ 20 ಕೋಟಿ ರೂ ಸಿಗುವ ನಿರೀಕ್ಷೆ ಇದೆ.