ಅಪಾರ ಸಂಖ್ಯೆಯ ಅಭಿಮಾನಿಗಳಿಂದು 'ಸಲಾರ್' ಸಿನಿಮಾವನ್ನು ಬಹಳ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಅನೇಕ ಚಿತ್ರಮಂದಿರಗಳ ಬಳಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಸೂಪರ್ ಸ್ಟಾರ್ ಪ್ರಭಾಸ್ ಹಾಗೂ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. 2023ರ ಸೂಪರ್ ಹಿಟ್ ಸಿನಿಮಾಗಳ ದಾಖಲೆ ಪುಡಿಗಟ್ಟುವ ತವಕದಲ್ಲಿ 'ಸಲಾರ್' ಇದೆ.
ಅಡ್ವಾನ್ಸ್ ಟಿಕೆಟ್ ಬುಕಿಂಗ್ ಕಲೆಕ್ಷನ್:ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಸಲಾರ್ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಕಲೆಕ್ಷನ್ ಈ ವರ್ಷದ ಸೂಪರ್ ಹಿಟ್ ಸಿನಿಮಾಗಳಾದ ಜವಾನ್, ಪಠಾಣ್, ಅನಿಮಲ್ ಮತ್ತು ಲಿಯೋ ಸೇರಿದಂತೆ ಹಲವು ಸಿನಿಮಾಗಳಿಗಿಂತ ಮುಂದಿದೆ. ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಶಾರುಖ್ ಖಾನ್ ಅವರ ಡಂಕಿಯೊಂದಿಗೆ ರೇಸ್‌ನಲ್ಲಿದ್ದು, ಸರಿಯಾದ ಪ್ರಮಾಣದಲ್ಲಿ ಸ್ಕ್ರೀನ್ಗಳು ಲಭ್ಯವಾಗಿಲ್ಲ ಎಂಬ ವದಂತಿಗಳ ಹೊರತಾಗಿಯೂ, 'ಸಲಾರ್' ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುವ ನಿರೀಕ್ಷೆಯಿದೆ. ಮೊದಲ ದಿನದ ಮುಂಗಡ ಟಿಕೆಟ್ ಬುಕಿಂಗ್ ವಿಚಾರದಲ್ಲಿ 'ಸಲಾರ್' ಬರೋಬ್ಬರಿ 48.94 ಕೋಟಿ ರೂಪಾಯಿಗಳ ವ್ಯವಹಾರ ನಡೆಸಿದೆ ಎಂದು ಸ್ಯಾಕ್ನಿಲ್ಕ್ ವರದಿ ತಿಳಿಸಿದೆ. ಈ ಅಡ್ವಾನ್ಸ್ ಟಿಕೆಟ್ ಅಂಕಿ-ಅಂಶ 2023ರ ಸೂಪರ್ ಹಿಟ್ ಸಿನಿಮಾಗಳನ್ನು ಹಿಂದಿಕ್ಕುವ ಸೂಚನೆ ಕೊಟ್ಟಿದೆ. 48.94 ಕೋಟಿ ರೂಪಾಯಿ ಆನ್ಲೈನ್ ವ್ಯವಹಾರದ ಮಾಹಿತಿ. ಈ ಅಂಕಿ ಅಂಶ ಏರಿ, ಫೈನಲ್ ಕಲೆಕ್ಷನ್ ನಾಳೆ ಮುಂಜಾನೆ ಗೊತ್ತಾಗಲಿದೆ.
2023ರ ಹಿಟ್ ಸಿನಿಮಾಗಳ ದಾಖಲೆ:ಸಿದ್ಧಾರ್ಥ್ ಆನಂದ್ ನಿರ್ದೇಶನದ, ಎಸ್ಆರ್ಕೆ ಅಭಿನಯದ ಪಠಾಣ್ ಸಿನಿಮಾ ತನ್ನ ಮೊದಲ ದಿನದ ಆನ್ಲೈನ್ ವ್ಯವಹಾರದಲ್ಲಿ 32.01 ಕೋಟಿ ರೂ. ಗಳಿಸುವ ಮೂಲಕ ದಾಖಲೆ ಸೃಷ್ಟಿಸಿತ್ತು. ಶಾರುಖ್ ಖಾನ್ ಅವರ ಮತ್ತೊಂದು ಸಿನಿಮಾ 'ಜವಾನ್' ಈ ಅಂಕಿ ಅಂಶವನ್ನು ಮೀರಿಸಿತ್ತು. ಅಡ್ವಾನ್ಸ್ ಟಿಕೆಟ್ ವ್ಯವಹಾರದಲ್ಲಿ 40.75 ಕೋಟಿ ರೂ.ಗಳನ್ನು ಗಳಿಸಿತ್ತು. ಇನ್ನೂ ರಣ್ಬೀರ್ ಕಪೂರ್ ಅವರ ಇತ್ತೀಚಿನ ಬ್ಲಾಕ್ಬಸ್ಟರ್ ಸಿನಿಮಾ ಅನಿಮಲ್ ಮುಂಗಡ ಟಿಕೆಟ್ ಬುಕಿಂಗ್ ವ್ಯವಹಾರದಲ್ಲಿ 33.97 ಕೋಟಿ ರೂ.ನ ವ್ಯವಹಾರ ನಡೆಸಿ ಅದ್ಭುತ ಆರಂಭ ಪಡೆದಿತ್ತು. ಇನ್ನೂ ಸೌತ್ ಸೂಪರ್ ಸ್ಟಾರ್ ವಿಜಯ್ ಅವರ ಇತ್ತೀಚಿನ ಲಿಯೋ ಕೂಡ ಅದ್ಭುತ ಯಶಸ್ಸನ್ನು ಕಂಡಿತ್ತು. ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ಮೊದಲ ದಿನಕ್ಕೆ 46.36 ಕೋಟಿ ರೂ. ಗಳಿಸಿತ್ತು. ಇಂದು ಬಿಡುಗಡೆ ಆಗಿರುವ 'ಸಲಾರ್' ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಕಲೆಕ್ಷನ್ - ಬರೋಬ್ಬರಿ 48.94 ಕೋಟಿ ರೂಪಾಯಿ.