ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಶನ್ನ ಚೊಚ್ಚಲ ಚಿತ್ರ 'ಸಲಾರ್' ಡಿಸೆಂಬರ್ 22 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆಯುತ್ತಿದೆ. ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ 500 ಕೋಟಿ ರೂ. ಗಡಿ ದಾಟಿದ್ದು, ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 300 ಕೋಟಿ ರೂಪಾಯಿಯ ಗಡಿ ಸಮೀಪಿಸಿದೆ. ಜಾಗತಿಕ ಕಲೆಕ್ಷನ್ ಅಂಕಿ-ಅಂಶ ಗಮನಿಸಿದ್ರೆ, ಬಾಹುಬಲಿ ಸರಣಿಯ ನಂತರ ವಿಶ್ವದಾದ್ಯಂತ 500 ಕೋಟಿ ರೂ. ಗಡಿ ದಾಟಿದ ಪ್ರಭಾಸ್ ಅವರ ಮೂರನೇ ಸಿನಿಮಾ 'ಸಲಾರ್' ಆಗಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಜೊತೆ ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಆ್ಯಕ್ಷನ್ ಮೂವಿ ಕಳೆದ ದಿನ ಭಾರತದಾದ್ಯಂತ ಎಲ್ಲಾ ಭಾಷೆ ಸೇರಿ 17 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ ಸಲಾರ್ ಸಿನಿಮಾದ ದೇಶಿಯ ಕಲೆಕ್ಷನ್ - 297.40 ಕೋಟಿ ರೂ. ಆಗಿದೆ. ಇಂದು 300 ಕೋಟಿ ರೂ. ಗಡಿ ದಾಟುವ ನಿರೀಕ್ಷೆ ಇದೆ.
ಬುಧವಾರದ ಹೊತ್ತಿಗೆ ಪ್ರಶಾಂತ್ ನೀಲ್ ನಿರ್ದೇಶನ ಸಲಾರ್ 500 ಕೋಟಿ ರೂ.ನ ಕ್ಲಬ್ಗೆ ಪ್ರವೇಶಿಸಿದೆ. ಬಿಡುಗಡೆಯಾದ ಆರು ದಿನಗಳಲ್ಲಿ ಚಿತ್ರ 500 ಕೋಟಿ ರೂ. ಕಲೆಕ್ಷನ್ ಮಾಡುವಲ್ಲಿ ಯಶಸ್ಸು ಕಂಡಿದೆ. ಬಾಹುಬಲಿ 1 ಮತ್ತು ಬಾಹುಬಲಿ 2 ನಂತರ 500 ಕೋಟಿ ರೂ.ನ ಕ್ಲಬ್ ಪ್ರವೇಶಿಸಿದ ಪ್ರಭಾಸ್ ಅವರ ಮೂರನೇ ಸಿನಿಮಾವಿದು.