ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸ್ ಪ್ರಮುಖ ಪಾತ್ರ ನಿರ್ವಹಿಸಿರುವ ಸಲಾರ್ ಸಿನಿಮಾ ಕಳೆದ ಶುಕ್ರವಾರ ತೆರೆಗಪ್ಪಳಿಸಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಬಹುತೇಕ ಸಕಾರಾತ್ಮಕ ಪ್ರತಿಕ್ರಿಯೆ ಸ್ವೀಕರಿಸಿದೆ. ಗಲ್ಲಾಪೆಟ್ಟಿಗೆಯಲ್ಲಿ ಅದ್ಭುತ ಅಂಕಿ ಅಂಶಗಳೊಂದಿಗೆ ಪ್ರಯಾಣ ಆರಂಭಿಸಿತ್ತು. ಅದಾಗ್ಯೂ, ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಸಲಾರ್ ತನ್ನ ಮೊದಲ ಮಂಗಳವಾರ ಬಾಕ್ಸ್ ಆಫೀಸ್ನಲ್ಲಿ ಕೊಂಚ ಕುಸಿತ ಕಂಡಿದೆ. ವಾರದ ದಿನಗಳಾದ ಹಿನ್ನೆಲೆ ಸಿನಿಮಾ ಗಳಿಕೆ ಇಳಿಕೆಯಾಗಿದೆ.
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಸಲಾರ್ ಡಿಸೆಂಬರ್ 22 ರಂದು ಅಂದರೆ ಕಳೆದ ಶುಕ್ರವಾರ ಚಿತ್ರಮಂದಿರ ಪ್ರವೇಶಿಸಿದೆ. ಅಂದಿನಿಂದಲೂ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ವಾರಾಂತ್ಯದಲ್ಲಿ ಉತ್ತಮ ವ್ಯವಹಾರ ನಡೆಸಿದ್ದಲ್ಲದೇ, ಕ್ರಿಸ್ಮಸ್ ರಜಾದಿನದ ಸದುಪಯೋಗ ಪಡೆದುಕೊಂಡಿದೆ. ಸಿನಿಮಾ ತನ್ನ ಸೋಮವಾರವೂ ಅದ್ಭುತ ಪ್ರದರ್ಶನ ನೀಡಿದೆ. ಆದರೆ ಮಂಗಳವಾರದ ಗಳಿಕೆಯಲ್ಲಿ ಕೊಂಚ ಹಿನ್ನೆಡೆ ಕಂಡಿದೆ. ಸಲಾರ್ ಕಳೆದ ದಿನ ಭಾರತದಲ್ಲಿ ಎಲ್ಲಾ ಭಾಷೆಯೂ ಸೇರಿ ಸರಿಸುಮಾರು 23.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಈವರೆಗೆ 278.90 ಕೋಟಿ ರೂಪಾಯಿ ಸಂಪಾದಿಸಿದೆ.
ಸಲಾರ್ ಸಿನಿಮಾ ತೆರೆಕಂಡ ದಿನವೇ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 90.07 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಈ ಮೂಲಕ 2023ರಲ್ಲಿ ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿತು. ಎರಡನೇ ದಿನ 56.35 ಕೋಟಿ ರೂ., ಮೂರನೇ ದಿನ 62.05 ಕೋಟಿ ರೂ., ನಾಲ್ಕನೇ ದಿನ 41.24 ಕೋಟಿ ರೂ. ಗಳಿಸಿದ್ದ ಸಲಾರ್ ಐದನೇ ದಿನ 23.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.