ಹೈದರಾಬಾದ್: ಭಾರಿ ನಿರೀಕ್ಷೆಯೊಂದಿಗೆ ಬಿಡುಗಡೆಯಾದ 'ಸಲಾರ್: ಪಾರ್ಟ್ 1 ಸೀಸ್ಫೈರ್' ಸಿನಿಮಾ ಅಂದುಕೊಂಡಂತೆ ಭಾರಿ ಹಿಟ್ ಆಗಿದೆ. ಮೊದಲ ದಿನವೇ 90.7 ಕೋಟಿ ರೂ. ಅನ್ನು ಗಲ್ಲಾ ಪೆಟ್ಟಿಗೆಯಲ್ಲಿ ಬಾಚಿಕೊಂಡಿತ್ತು. ಈ ಮೂಲಕ ಅಟ್ಲಿ ನಿರ್ದೇಶನದ, ಶಾರುಖ್ ಖಾನ್ ಅಭಿನಯದ 'ಜವಾನ್' ಚಿತ್ರದ ದಾಖಲೆಯನ್ನು ಧೂಳಿಪಟ ಮಾಡಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೆ ದೇಶಿಯವಾಗಿ ₹ 400 ಕೋಟಿ ಗಳಿಕೆ ಮಾಡಿದ್ದರೆ, ಜಾಗತಿಕ ಮಟ್ಟದಲ್ಲಿ 700 ಕೋಟಿ ರೂಪಾಯಿ ಕ್ಲಬ್ಗೆ ಸೇರಿದೆ.
ಸಿನಿಮಾ ಬಿಡುಗಡೆಯಾಗಿ 19ನೇ ದಿನದಂದು 'ಸಲಾರ್' 2.15 ಕೋಟಿ ಸಂಪಾದಿಸಿದ್ದು, ಈ ಮೂಲಕ ಇಲ್ಲಿಯವರೆಗೆ ದೇಶಿಯವಾಗಿ 397.80 ಕೋಟಿ ಬಾಚುವ ಮೂಲಕ 400 ಕೋಟಿ ಮೈಲಿಗಲ್ಲಿಗೆ ತಲುಪಿದೆ. ಈ ಚಿತ್ರವು ಬಹುತೇಕ ನೈಟ್ ಶೋ (17.43ರಷ್ಟು) ಅಭಿಮಾನಿಗಳನ್ನು ಸೆಳೆಯುತ್ತಿದ್ದು, ಬೆಳಗ್ಗೆಗೆ ಹೋಲಿಕೆ ಮಾಡಿದಾಗ (14.27ರಷ್ಟು) ರಾತ್ರಿ ಶೋಗೆ ಚಿತ್ರಮಂದಿರಗಳು ಭರ್ತಿಯಾಗುತ್ತಿವೆ. ತೆಲುಗು (15.29ರಷ್ಟು) ಅಭಿಮಾನಿಗಳಿಗೆ ಹೋಲಿಸಿದರೆ, ಚಿತ್ರವು ತಮಿಳು (16.40) ಅಭಿಮಾನಿಗಳನ್ನು ಹೆಚ್ಚು ಸೆಳೆದಿದೆ. ಇನ್ನು ಹಿಂದಿ ಭಾಷಿಕ ಪ್ರದೇಶದಲ್ಲಿ ಸೀಟು ಭರ್ತಿಯಲ್ಲಿ 9.84ರಷ್ಟು ಕುಸಿತ ಕಂಡಿದೆ.
ದಕ್ಷಿಣ ಭಾರತದ ನಟ ಅತಿ ಹೆಚ್ಚು ಸಂಪಾದನೆ ಮಾಡಿದ ಟಾಪ್ 5 ಚಿತ್ರದಲ್ಲಿ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಸ್ಥಾನವನ್ನು ಪಡೆದಿದೆ. ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ ಐದು ಚಿತ್ರಗಳ ಪಟ್ಟಿಯಲ್ಲಿ ರಜನಿಕಾಂತ್ ನಟನೆಯ '2.0', ಯಶ್ 'ಕೆಜಿಎಫ್: ಚಾಪ್ಟರ್ 2', ಎಸ್ಎಸ್ ರಾಜಮೌಳಿಯ 'ಆರ್ಆರ್ಆರ್' ಮತ್ತು 'ಬಾಹುಬಲಿ 2' ಸ್ಥಾನ ಪಡೆದಿವೆ. 2018ರಲ್ಲಿ ಬಿಡುಗಡೆಯಾದ ರಜನಿಕಾಂತ್ ಅವರ '2.0' ಗಳಿಕೆ ಹಿಂದಿಕ್ಕಿ 'ಸಲಾರ್' ಸ್ಥಾನ ಪಡೆದಿದೆ. 'ಸಲಾರ್' ಇದೀಗ 'ಜವಾನ್', 'ಪಠಾಣ್' ಮತ್ತು 'ಅನಿಮಲ್' ಅಥವಾ 'ಗದಾರ್ 2' ಸಿನಿಮಾವನ್ನು ಹಿಂದಿಕ್ಕಲಿದೆ ಎಂಬ ಲೆಕ್ಕಾಚಾರ ನಡೆಸಲಾಗಿದೆ. ಈ ಎಲ್ಲಾ ಚಿತ್ರಗಳು ದೇಶಿಯ ಮಾರುಕಟ್ಟೆಯಲ್ಲಿ 500 ಕೋಟಿ ಕ್ಲಬ್ ಸೇರಿವೆ. ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ದಾಖಲೆ ಎಸ್ಎಸ್ ರಾಜಮೌಳಿ ಅವರ 'ಬಾಹುಬಲಿ 2: ಕನ್ಕ್ಲೂಷನ್' ಚಿತ್ರ ಆಗಿದೆ. ಈ ಚಿತ್ರ 1030.42 ಕೋಟಿಯನ್ನು ಸಂಪಾದಿಸಿತ್ತು.