ನಟ ಪ್ರಭಾಸ್ ಅಭಿನಯದ 'ಸಲಾರ್' ದಾಖಲೆಯ ಬಾಕ್ಸ್ ಆಫೀಸ್ ಪ್ರಯಾಣ ಆರಂಭಿಸಿತ್ತು. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ 2023ರ ಅತಿದೊಡ್ಡ ಓಪನರ್ ಆಗಿತ್ತು. ತೆರೆಗಪ್ಪಳಿಸಿ ಇದೀಗ ಎರಡು ವಾರಗಳಾಗಿದ್ದು, ಆ್ಯಕ್ಷನ್ ಎಂಟರ್ಟೈನ್ಮೆಂಟ್ ಗಳಿಕೆ ಸದ್ಯ ಇಳಿಕೆಯಾಗುತ್ತಾ ಸಾಗುತ್ತಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿಯಂತೆ, ಸಲಾರ್ ಗುರುವಾರ ಸುಮಾರು 4.50 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 378 ಕೋಟಿ ರೂ.ಗೂ ಹೆಚ್ಚು ವ್ಯವಹಾರ ನಡೆಸಿದೆ. ಸಿನಿಮಾ ವ್ಯವಹಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಮಾಹಿತಿಯಂತೆ, ಬುಧವಾರದಂದೇ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 650 ಕೋಟಿ ರೂಪಾಯಿಯ ಗಡಿ ದಾಟಿದೆ. ಈ ಮೂಲಕ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಶನ್ನ 'ಸಲಾರ್' ಸಿನಿಮಾ ಬಾಹುಬಲಿ 2 ಮತ್ತು ಆರ್ಆರ್ಆರ್ ನಂತರ 650 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿರುವ ಮೂರನೇ ತೆಲುಗು ಚಿತ್ರವಾಗಿದೆ.
ಆಸ್ಕರ್ ಗೌರವಕ್ಕೆ ಪಾತ್ರವಾಗಿರುವ, ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಒಟ್ಟು 1,230 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ರಾಜಮೌಳಿ ಮತ್ತು ಪ್ರಭಾಸ್ ಕಾಂಬಿನೇಶನ್ನ ಬಾಹುಬಲಿ 2 ಜಾಗತಿಕವಾಗಿ 1,788 ಕೋಟಿ ರೂ. ಬಾಚಿಕೊಂಡಿದೆ. 500 ಕೋಟಿ ರೂ. ಕಲೆಕ್ಷನ್ ಮಾಡಿರುವ ಮೂರು ಸಿನಿಮಾಗಳನ್ನು ಹೊಂದಿರುವ ದಕ್ಷಿಣ ಚಿತ್ರರಂಗದ ಏಕೈಕ ನಟ ಪ್ರಭಾಸ್.
ಇದನ್ನೂ ಓದಿ:'ನಿಮ್ಮ ಪ್ರೀತಿ, ಅಭಿಮಾನವೇ ನನಗೆ ಉಡುಗೊರೆ': ಹುಟ್ಟುಹಬ್ಬದ ಬಗ್ಗೆ ಅಭಿಮಾನಿಗಳಿಗೆ ಯಶ್ ಮನವಿ