ಬಾಹುಬಲಿ ಖ್ಯಾತಿಯ ಪ್ರಭಾಸ್ ಮತ್ತು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಕಾಂಬಿನೇಶನ್ನ ಚೊಚ್ಚಲ ಚಿತ್ರ 'ಸಲಾರ್' ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಸಿನಿಮಾ ಮಂಗಳವಾರದ ವೇಳೆಗೆ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 369 ಕೋಟಿ ರೂ. ಕಲೆಕ್ಷನ್ ಮಾಡುವಲ್ಲಿ ಯಶ ಕಂಡಿದೆ. ಡಿಸೆಂಬರ್ 22 ರಂದು ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಲಾರ್ ತೆರೆಗಪ್ಪಳಿಸಿತು. ಒಂದು ದಿನ ಮುನ್ನ, ಡಿ. 21ರಂದು ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರ ಡಂಕಿ ಸಿನಿಮಾ ಕೂಡ ತೆರೆಕಂಡಿದೆ.
ಸಲಾರ್ ತನ್ನ 12ನೇ ದಿನ ಅಂದರೆ ಮಂಗಳವಾರದಂದು ಭಾರತದಲ್ಲಿ 7.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸಿನಿಮಾ ತೆರೆಕಂಡ 12 ದಿನಗಳಲ್ಲಿ ಒಟ್ಟು 369.37 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ. ಹಿಂದಿ ಮತ್ತು ತೆಲುಗು ಆವೃತ್ತಿಯ ಸಿನಿಮಾವನ್ನು ಹೆಚ್ಚು ಜನರು ವೀಕ್ಷಿಸಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ಈ ಭಾಷೆಗಳು ಹೆಚ್ಚಿನ ಪ್ರಭಾವ ಬೀರಿದೆ.
ಉಗ್ರಂ, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ, ಟಿನ್ನು ಆನಂದ್ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆಜಿಎಫ್, ಕಾಂತಾರ ಸೇರಿದಂತೆ ಕೆಲ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ, ದಕ್ಷಿಣ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಖಾನ್ಸಾರ್ ಎಂಬ ಕಾಲ್ಪನಿಕ ನಗರದಲ್ಲಿ ಕಥೆ ನಡೆಯುತ್ತದೆ.