ನಟ ಪ್ರಭಾಸ್ ಅಭಿನಯದ ಹೊಸ ಸಿನಿಮಾ 'ಸಲಾರ್' ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. ಈಗಾಗಲೇ ಜಬರ್ದಸ್ತ್ ಟೀಸರ್ ಬಿಡುಗಡೆಯಾಗಿದ್ದು, ಸಿನಿಮಾ ಮೇಲೆ ಪ್ರೇಕ್ಷಕರ ಉತ್ಸಾಹ ಇಮ್ಮಡಿಯಾಗಿದೆ. ಟೀಸರ್ನಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಆ್ಯಕ್ಷನ್ ಲೋಕವನ್ನೇ ಪ್ರದರ್ಶಿಸಿದ್ದಾರೆ.
ಹೈ-ಆ್ಯಕ್ಟೇನ್ ಆ್ಯಕ್ಷನ್ ಸೀಕ್ವೆನ್ಸ್ಗಳನ್ನು ನೀಡುವಲ್ಲಿ ಹೆಸರುವಾಸಿಯಾಗಿರುವ ನೀಲ್ ಅವರ ಸಿನಿಮಾ ವೀಕ್ಷಿಸಲು ಪ್ರೇಕ್ಷಕರು ಸಾಕಷ್ಟು ಕಾತರರಾಗಿದ್ದಾರೆ. ಟ್ರೇಲರ್ಗೆ ವೀಕ್ಷಕರ ಪ್ರತಿಕ್ರಿಯೆ ಕೂಡ ದೊಡ್ಡ ಮಟ್ಟದಲ್ಲೇ ಲಭಿಸಿದೆ. ಎಲ್ಲಾ ಭಾಷೆಗಳ ಟ್ರೇಲರ್ಗಳಿಗೆ ಕೇವಲ 24 ಗಂಟೆಗಳೊಳಗೆ ಯೂಟ್ಯೂಬ್ನಲ್ಲಿ 116 ಮಿಲಿಯನ್ಗೂ ಹೆಚ್ಚು ವೀಕ್ಷಣೆ ಸಿಕ್ಕಿದೆ.
ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಹಂಚಿಕೊಂಡಿದೆ. "ಒನ್ ಮ್ಯಾನ್ ಆರ್ಮಿ ಸಲಾರ್ ಯೂಟ್ಯೂಬ್ಲ್ಲಿ ಅಬ್ಬರಿಸಿದೆ. 24 ಗಂಟೆಯೊಳಗೆ 116 ಮಿಲಿಯನ್ ವೀಕ್ಷಣೆ, 2.7 ಮಿಲಿಯನ್ ಲೈಕ್ಸ್ ಆಗಿದೆ" ಎಂದು ಮಾಹಿತಿ ನೀಡಿದೆ.
ಶುಕ್ರವಾರ ಸಂಜೆ 7:19ಕ್ಕೆ ಅನಾವರಣಗೊಂಡ ಸಲಾರ್ ಟ್ರೇಲರ್ ಅದ್ಭುತ ಸಿನಿಮೀಯ ಅನುಭವ ನೀಡಲಿರುವ ಭರವಸೆ ಕೊಟ್ಟಿದೆ. 24 ಗಂಟೆಯ ವೀಕ್ಷಣಾ ಸಂಖ್ಯೆಯು, 'ಸಲಾರ್' ಭಾರತೀಯ ಸಿನಿಮಾ ರಂಗದ ಬಹುನಿರೀಕ್ಷಿತ ಚಿತ್ರ ಎಂಬುದನ್ನು ಖಚಿತಪಡಿಸಿದೆ. ಭಾರತೀಯ ಸಿನಿ ಲೋಕದ ಬ್ಲಾಕ್ಬಸ್ಟರ್ ಸಿನಿಮಾ 'ಕೆಜಿಎಫ್'ನಿಂದಾಗಿ ಹೆಸರುವಾಸಿಯಾಗಿರುವ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿರುವುದರಿಂದ ಮತ್ತು ಬಾಹುಬಲಿ ಖ್ಯಾತಿಯ ಪ್ರಭಾಸ್ ತೆರೆ ಮೇಲೆ ಅಬ್ಬರಿಸಿರುವುದರಿಂದ ಈ ಪ್ರಾಜೆಕ್ಟ್ ಮೇಲಿನ ನಿರೀಕ್ಷೆ, ಉತ್ಸಾಹ, ಕುತೂಹಲ ಬೆಟ್ಟದಷ್ಟಿದೆ. ಅಲ್ಲದೇ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಅವರಂತಹ ಸ್ಟಾರ್ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕೆಲಸ ಮಾಡಿದ್ದಾರೆ.