'ಬಾಹುಬಲಿ 2' ಸಿನಿಮಾ ಮೂಲಕ ಭಾರತದಾದ್ಯಂತ ಭಾರಿ ಹವಾ ಎಬ್ಬಿಸಿದ್ದ ನಟ ಪ್ರಭಾಸ್ ಅವರ ಈ ಹಿಂದಿನ ಕೆಲವು ಸಿನಿಮಾಗಳು ಹೇಳಿಕೊಳ್ಳುವ ಗೆಲುವು ಕಾಣಲಿಲ್ಲ. ಆದರೀಗ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ತೆರೆಗೆ ಬಂದಿರುವ 'ಸಲಾರ್' ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಸಿನಿಪ್ರಿಯರ ನಿರೀಕ್ಷೆ ತಲುಪುವಲ್ಲಿ ಸಿನಿಮಾ ಯಶಸ್ವಿಯಾಗಿದೆ. ತೆರೆಗೆ ಬಂದ ಎರಡೇ ದಿನಗಳಲ್ಲಿ 295 ಕೋಟಿ ರೂ.ಗೂ ಹೆಚ್ಚು ಹಣ ಗಳಿಸಿದೆ ಎಂದು ಚಿತ್ರ ನಿರ್ಮಾಪಕರು ಹೇಳುತ್ತಿದ್ದಾರೆ.
'ಸಲಾರ್' ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ ಜಾಗತಿಕ ಕಲೆಕ್ಷನ್ನ ಅಪ್ಡೇಟ್ಸ್ ನೀಡಿದೆ. ಇಂದು ಶೇರ್ ಮಾಡಲಾಗಿರುವ ಈ ಪೋಸ್ಟ್ನಲ್ಲಿ, ವಿಶ್ವಾದ್ಯಂತ 295.7 ಕೋಟಿ ರೂಪಾಯಿ ಗಳಿಸಿರುವುದಾಗಿ ಬಹಿರಂಗಪಡಿಸಿದೆ. ಸಲಾರ್ ಭಾರತದ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ 2023ರ ಹಿಟ್ ಸಿನಿಮಾಗಳಾದ ಪಠಾಣ್ ಮತ್ತು ಜವಾನ್ ಮೀರಿಸಿದೆ.
2023ರ ಮೊದಲ ಬ್ಲಾಕ್ಬಸ್ಟರ್ ಎಂದು ಪರಿಗಣಿಸಲಾದ ಪಠಾಣ್ ತೆರೆಕಂಡ ಎರಡು ದಿನಗಳಲ್ಲಿ ಸುಮಾರು 235 ಕೋಟಿ ರೂ. ಗಳಿಸಿತ್ತು. ಜವಾನ್ ಬಿಡುಗಡೆಯಾದ ಎರಡು ದಿನಗಳಲ್ಲಿ ಜಾಗತಿಕವಾಗಿ 240 ಕೋಟಿ ರೂ. ಬಾಚಿಕೊಂಡಿತ್ತು. ಆದರೆ, ಸಲಾರ್ ಎರಡೇ ದಿನದಲ್ಲಿ 295 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಜಾಗತಿಕ ಕಲೆಕ್ಷನ್ ₹295 ಕೋಟಿ:ಸಿನಿಮಾ ಭಾರತೀಯ ಮಾರುಕಟ್ಟೆಯಲ್ಲಿ ನಡೆಸಿದ ವ್ಯವಹಾರ 145 ಕೋಟಿ ರೂ. ತೆರೆಕಂಡ ಮೊದಲ ದಿನ ದೇಶದಲ್ಲಿ ಸುಮಾರು 90 ಕೋಟಿ ರೂ. ವ್ಯವಹಾರ ನಡೆಸಿದೆ. ಎರಡನೇ ದಿನ ಕೊಂಚ ಕುಸಿತ ಕಂಡರೂ, 55 ಕೋಟಿ ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಮಾಡಿದೆ.