ಬಾಲಿವುಡ್ ಕಿಂಗ್ ಖಾನ್ ಅವರ ಡಂಕಿ ಮತ್ತು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಸಲಾರ್ ಈ ವರ್ಷದ ಎರಡು ಬಹುನಿರೀಕ್ಷಿತ ಸಿನಿಮಾಗಳು. ಇಂದು ಡಂಕಿ ತೆರೆಗಪ್ಪಳಿಸಿದೆ. ನಾಳೆ ಸಲಾರ್ ಬಿಡುಗಡೆಯಾಗಲಿದೆ. ನಾಳೆಯಿಂದ ಬಾಕ್ಸ್ ಆಫೀಸ್ನಲ್ಲಿ ಈ ಎರಡೂ ಸಿನಿಮಾಗಳು ಮುಖಾಮುಖಿಯಾಗಲಿದೆ. ಅಡ್ವಾನ್ಸ್ ಟಿಕೆಟ್ ಬುಕಿಂಗ್ ವಿಚಾರದಲ್ಲಿ ಸಲಾರ್ ಒಂದು ಹೆಜ್ಜೆ ಮುಂದಿದೆ.
ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಮೊದಲ ದಿನದ ಶೋಗಳಿಗೆ 14,10,965 ಟಿಕೆಟ್ಗಳನ್ನು ಮಾರಾಟ ಮಾಡಿದ್ದು, 29.55 ಕೋಟಿ ರೂ.ಗಳ ವ್ಯವಹಾರ ನಡೆಸಿದೆ. ಇದು ಮೊದಲ ದಿನದ ಆನ್ಲೈನ್ ವ್ಯವಹಾರವಷ್ಟೇ. ಈ ಅಂಕಿ - ಅಂಶ ಏರಿಕೆ ಕಾಣಲಿದೆ. 'ಸಲಾರ್' ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಪ್ರೊಸೆಸ್ ಅನ್ನು ಕೆಲ ದಿನಗಳ ಹಿಂದೆ ತೆರೆಯಲಾಗಿದ್ದು, ಕಲೆಕ್ಷನ್ ಅಂಕಿ - ಅಂಶಗಳು ಉತ್ತಮವಾಗಿರುವಂತೆ ತೋರುತ್ತಿದೆ. ನಾಳೆ ಸಲಾರ್ ಸಿನಿಮಾ ಹಿಂದಿ, ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಭಾರತದಾದ್ಯಂತ 10,472 ಸ್ಕ್ರೀನ್ಗಳಲ್ಲಿ ತೆರೆಕಾಣಲಿದೆ. ಮತ್ತೊಂದೆಡೆ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಡಂಕಿ ಸಿನಿಮಾ ಸುಮಾರು 25 ರಿಂದ 30 ಕೋಟಿ ರೂಪಾಯಿ ಗಳಿಸುವ ಸಾಧ್ಯತೆಗಳಿವೆ. ಮುಂಗಡ ಬುಕಿಂಗ್ ವ್ಯವಹಾರದಲ್ಲಿ ಸೂಮಾರು 15 ಕೋಟಿ ರೂ. ಗಳಿಸಿದೆ.
ಸಲಾರ್ ಸುತ್ತಲಿನ ಉತ್ಸಾಹ ಜೋರಾಗಿದೆ. ಚಿತ್ರೋದ್ಯಮದ ಪಂಡಿತರು, ವಿಮರ್ಶಕರ ಪ್ರಕಾರ, ಸಲಾರ್ನ ಮೊದಲ ದಿನದ ಕಲೆಕ್ಷನ್ ಮೂಲಕ ದಾಖಲೆ ಬರೆಯಲಿದೆ. ಮುಂಗಡ ಟಿಕೆಟ್ ಬುಕಿಂಗ್ ವಿಚಾರದಲ್ಲಿ ದಾಖಲೆಯ ಅಂಕಿ - ಅಂಶ ದಾಖಲಾಗಿದೆ. ಸುಮಾರು 1.3 ಮಿಲಿಯನ್ ಜನರು ಬುಕ್ ಮೈ ಶೋ ಅಪ್ಲಿಕೇಶನ್ನಲ್ಲಿ ತಮ್ಮ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಸಲಾರ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದು, ಅಭಿಮಾನಿಗಳು ಉತ್ಸುಕರಾಗಿದ್ದಾರೆ.