ವಿಭಿನ್ನ ಕಥೆಗಳನ್ನು ಪ್ರೇಕ್ಷಕರು ಯಾವಾಗಲೂ ಇಷ್ಟಪಡುತ್ತಾರೆ ಎಂಬುದನ್ನು ವಿರೂಪಾಕ್ಷ ಸಿನಿಮಾ ಮತ್ತೊಮ್ಮೆ ಸಾಬೀತು ಮಾಡಿದೆ. ಸುಪ್ರೀಮ್ ಸ್ಟಾರ್ ಸಾಯಿಧರಮ್ ತೇಜ್ ಅವರ ಈ ಸಿನಿಮಾ ಏಪ್ರಿಲ್ 21 ರಂದು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ. ಕಳೆದ ಏಳು ದಿನಗಳಲ್ಲಿ ಸುಮಾರು 62.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿದೆ. ಇದೀಗ ವಿರೂಪಾಕ್ಷ ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ಶುಭ ಸಂದರ್ಭದಲ್ಲಿ ಚಿತ್ರತಂಡ ಹೊಸ ಅಪ್ಡೇಟ್ ನೀಡಿದೆ.
ಇಷ್ಟು ದಿನ ತೆಲುಗು ಭಾಷೆಯಲ್ಲಿ ಸದ್ದು ಮಾಡಿದ್ದ ಈ ಸಿನಿಮಾ ಇದೀಗ ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ತೆರೆ ಕಾಣಲು ಸಜ್ಜಾಗಿದೆ. ತೆಲುಗಿನಲ್ಲಿ ಬ್ಲಾಕ್ ಬಸ್ಟರ್ ಸಕ್ಸಸ್ ಪಡೆದ ವಿರೂಪಾಕ್ಷ ಈಗ ಬೇರೆ ಭಾಷೆಗಳಲ್ಲಿ ಸದ್ದು ಮಾಡಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಿತ್ರತಂಡ ಸಂತಸ ಹಂಚಿಕೊಂಡಿದೆ. ಚಿತ್ರವು ಹಿಂದಿಯಲ್ಲಿ ಗೋಲ್ಡ್ ಮೈನ್ಸ್ ಸಂಸ್ಥೆ, ತಮಿಳಿನಲ್ಲಿ ಸ್ಟುಡಿಯೋ ಗ್ರೀನ್ ಸಂಸ್ಥೆ ಮತ್ತು ಮಲಯಾಳಂನಲ್ಲಿ ಇ- 4 ಎಂಟರ್ಟೈನ್ಮೆಂಟ್ ಅಡಿ ಬಿಡುಗಡೆಯಾಗಲಿದೆ. ಆದರೆ, ಬಿಡುಗಡೆ ದಿನಾಂಕ ಇನ್ನೂ ತಿಳಿದುಬಂದಿಲ್ಲ.
ಇದನ್ನೂ ಓದಿ:ಜೂ. 1ರಂದು ಕಿಚ್ಚ ಸುದೀಪ್ ಸಿನಿಮಾ ಲಾಂಚ್: ಪ್ರಚಾರದ ನಡುವೆಯೇ ಅಭಿಮಾನಿಗಳಿಗೆ ಗುಡ್ನ್ಯೂಸ್
ವಿರೂಪಾಕ್ಷ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿತ್ತು. ಆದರೆ, ಡಬ್ಬಿಂಗ್ ಮತ್ತಿತರ ಕೆಲಸಗಳಿಗೆ ಸಮಯದ ಅಭಾವದಿಂದ ತೆಲುಗಿನಲ್ಲಿ ಮಾತ್ರ ಬಿಡುಗಡೆಯಾಗಿದೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಸುಕುಮಾರ್ ಶಿಷ್ಯ ಕಾರ್ತಿಕ್ ದಂಡು ನಿರ್ದೇಶನದ ಈ ಸಿನಿಮಾದಲ್ಲಿ ಸಾಯಿಧರಮ್ ತೇಜ್ ಎದುರು ಸಂಯುಕ್ತಾ ಮೆನನ್ ನಟಿಸಿದ್ದಾರೆ. ತೇಜ್ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವೂ ಇದಾಗಿದೆ. ಕಾಂತಾರ ಖ್ಯಾತಿಯ ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಸಿನಿಮಾವನ್ನು ಶ್ರೀ ವೆಂಕಟೇಶ್ವರ ಸಿನಿ ಚಿತ್ರ ಬ್ಯಾನರ್ ಅಡಿ ನಿರ್ಮಿಸಲಾಗಿದೆ. ಖ್ಯಾತ ನಿರ್ದೇಶಕ ಸುಕುಮಾರ್ ಈ ಚಿತ್ರಕ್ಕೆ ಸ್ಕ್ರೀನ್ ಪ್ಲೇ ಒದಗಿಸಿದ್ದಾರೆ. ಮಿಸ್ಟಿಕಲ್ ಥ್ರಿಲ್ಲರ್ ಆಗಿ ತೆರೆಕಂಡ ಈ ಸಿನಿಮಾ ತೆಲುಗು ಪ್ರೇಕ್ಷಕರ ಮನ ಗೆದ್ದಿದೆ. ಈ ಚಿತ್ರ ಮೊದಲ ದಿನ ಕಲೆಕ್ಷನ್ ವಿಚಾರದಲ್ಲಿ ಸಂಚಲನ ಮೂಡಿಸಿದೆ. ಮೊದಲ ದಿನ ವಿರೂಪಾಕ್ಷ ವಿಶ್ವಾದ್ಯಂತ ಸುಮಾರು 12 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಎರಡನೇ ದಿನದಲ್ಲಿ 28 ಕೋಟಿ ರೂಪಾಯಿ ಗಳಿಸಿದೆ. ಮೊದಲ ದಿನಕ್ಕೆ ಹೋಲಿಸಿದರೆ, ಎರಡನೇ ದಿನ ಕಲೆಕ್ಷನ್ ಹೆಚ್ಚಾಗಿದೆ. ಅಲ್ಲದೇ ಎರಡನೇ ದಿನಕ್ಕೆ ಹೋಲಿಸಿದರೆ, ಮೂರನೇ ದಿನ ಕೂಡ ಹೆಚ್ಚಿದ್ದು ವಿಶ್ವದಾದ್ಯಂತ 44 ಕೋಟಿ ರೂಪಾಯಿಗಳನ್ನು ಗಳಿಸಿದೆ ಎನ್ನುತ್ತಾರೆ ನಿರ್ಮಾಪಕರು. ಈ ಮಧ್ಯೆ ಈ ಚಿತ್ರವು ಕಲೆಕ್ಷನ್ ಮತ್ತು ಕಥೆಯ ವಿಷಯದಲ್ಲಿ ಇಂಡಸ್ಟ್ರಿಯಲ್ಲಿ ಒಳ್ಳೆಯ ಮಾತು ಗಳಿಸಿದೆ.
ಇದನ್ನೂ ಓದಿ:32 ಕೋಟಿ ರೂ. ಬಾಚಿಕೊಂಡ ಐಶ್ವರ್ಯಾ ರೈ ಸಿನಿಮಾ: 'ಪೊನ್ನಿಯಿನ್ ಸೆಲ್ವನ್ 2'ಕ್ಕೆ ಭಾರಿ ಮೆಚ್ಚುಗೆ