ಹೈದರಾಬಾದ್ (ತೆಲಂಗಾಣ): ನಟಿ ಸಾಯಿಪಲ್ಲವಿ ತಮ್ಮ ಮುಂಬರುವ ಚಿತ್ರ ವಿರಾಟ ಪರ್ವಂ ಸಿನಿಮಾದ ಪ್ರಚಾರಕ್ಕಾಗಿ ನಡೆದ ಸಂದರ್ಶನವೊಂದರಲ್ಲಿ ಧಾರ್ಮಿಕ ಸಂಘರ್ಷ ಮತ್ತು ಹಿಂಸಾಚಾರದ ಕುರಿತು ಮಾಡಿರುವ ಕಮೆಂಟ್ ಸಾಮಾಜಿಕ ಮಾಧ್ಯಮಗಳಲ್ಲಿ ಕೋಲಾಹಲವನ್ನು ಸೃಷ್ಟಿಸುತ್ತಿದೆ.
ವಿರಾಟ ಪರ್ವಂ ಚಿತ್ರದಲ್ಲಿ ನಕ್ಸಲ್ ಪಾತ್ರದಲ್ಲಿ ನಟಿಸಿರುವ ಸಾಯಿ ಪಲ್ಲವಿ ಕಾಶ್ಮೀರ ಫೈಲ್ಸ್ ಚಿತ್ರದ ಬಗ್ಗೆ ಮಾತನಾಡಿದ್ದು, ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು ಎಂದು ತೋರಿಸಲಾಗಿದೆ. ಆದರೆ, ಇತ್ತೀಚೆಗೆ ಕೋವಿಡ್ ಸಮಯದಲ್ಲಿ ಕೆಲವು ಮುಸ್ಲಿಂ ವ್ಯಕ್ತಿಗಳು ವಾಹನದಲ್ಲಿ ದನವನ್ನು ಕೊಂಡೊಯ್ಯುತ್ತಿದ್ದಾಗ ಅವರನ್ನು ತಡೆದು ಬಲವಂತವಾಗಿ ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿ ಹೊಡೆಯಲಾಯಿತು. ನೀವು ಧಾರ್ಮಿಕ ಸಂಘರ್ಷದ ಕುರಿತು ಮಾತನಾಡುವುದಾದರೆ, ಈ ಎರಡರ ಮಧ್ಯೆ ವ್ಯತ್ಯಾಸ ಏನಿದೆ? ಅದು ಆವತ್ತು ನಡೆದಿದೆ. ಇದು ಇವತ್ತು ನಡೆದಿದೆ, ಅಷ್ಟೇ ಮತ್ತೇನು ವ್ಯತ್ಯಾಸವಿಲ್ಲ ಎಂದು ಹೇಳಿದ್ದಾರೆ.
ಪ್ರತಿಯೊಬ್ಬರ ದೃಷ್ಟಿಕೋನವು ಅವರವರ ಪರಿಸರದ ಆಧಾರದ ಮೇಲೆ ವಿಭಿನ್ನವಾಗಿರುತ್ತದೆ. ಹಿಂಸೆಯ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ, ಯಾವುದು ಸರಿ ಯಾವುದು ತಪ್ಪು ಎಂದು ಹೇಳುವುದೂ ಕೂಡ ತುಂಬಾ ಕಷ್ಟ. ಆ ಸಮಯದಲ್ಲಿ ನಕ್ಸಲರು ಹಿಂಸೆಯಿಂದ ಮಾತ್ರ ನ್ಯಾಯ ಪಡೆಯಬಹುದು ಎಂದು ಭಾವಿಸಿದ್ದರು. ಇದು ಬಹಳ ಹಿಂದೆಯೇ ಸಂಭವಿಸಿದೆ. ನಮ್ಮ ದೃಷ್ಟಿಕೋನಗಳು ವಿಭಿನ್ನವಾಗಿರಬಹುದು.
ಪಾಕಿಸ್ತಾನಿ ಜನರು ಭಾರತೀಯ ಭದ್ರತಾ ಪಡೆಗಳನ್ನು ಭಯೋತ್ಪಾದಕರು ಎಂದು ಭಾವಿಸುತ್ತಾರೆ. ಅದೇ ರೀತಿ ನಾವು ನಾವು ಅವರ ಪಡೆಗಳನ್ನು ಭಯೋತ್ಪಾದಕರು ಎಂದು ಭಾವಿಸುತ್ತೇವೆ. ನಕ್ಸಲ್ ಚಳವಳಿ ಸರಿಯೋ ತಪ್ಪೋ ಎಂದು ಹೇಳುವುದು ತುಂಬಾ ಕಷ್ಟ. ಅವರು ತಮ್ಮ ಪರಿಸ್ಥಿತಿಗೆ ತಕ್ಕಂತೆ ಹಿಂಸಾಚಾರವೊಂದೇ ದಾರಿ ಎಂದು ಭಾವಿಸಿದ್ದರು. ಅದು ಆ ಕಾಲದ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ವಿವರಿಸಿದ್ದರು.