ಬೆಂಗಳೂರು:ಪೊಲೀಸ್ ಸ್ಟೋರಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಖಾಕಿ ತೊಟ್ಟು ಬೆಳ್ಳಿ ತೆರೆ ಮೇಲೆ ಅಬ್ಬರಿಸಿದ ನಟ ಡೈಲಾಗ್ ಕಿಂಗ್ ಸಾಯಿಕುಮಾರ್ ಸದ್ಯ ರಾಕ್ಷಸರು ಸಿನಿಮಾ ಮೂಲಕ ಮತ್ತೆ ಖಾಕಿ ತೊಟ್ಟು ಸಿಲ್ವರ್ ಸ್ಕ್ರಿನ್ ಮೇಲೆ ಮಿಂಚಲು ರೆಡಿಯಾಗಿದ್ದಾರೆ.
ಸಾಯಿಕುಮಾರ್ ಮಾತನಾಡಿ, ನಾನು ನಟನೆ ಆರಂಭಿಸಿ ಐವತ್ತು ವರ್ಷಗಳಾಗಿದೆ. ಅದರಲ್ಲೂ ಇಪ್ಪತ್ತೈದು ವರ್ಷಗಳ ಹಿಂದೆ ತೆರೆಕಂಡ 'ಪೊಲೀಸ್ ಸ್ಟೋರಿ' ನನಗೆ ಹೆಸರು ತಂದುಕೊಟ್ಟ ಚಿತ್ರ. ಈ ಸಮಯದಲ್ಲಿ ನಾನು ನನ್ನ ತಂದೆ ತಾಯಿಯನ್ನು ಸ್ಮರಿಸುತ್ತೇನೆ. ಹೆತ್ತವರು ಚಿತ್ರದ ನಂತರ ಅಜಯ್ ಕುಮಾರ್ ಅವರೊಂದಿಗೆ ರಾಕ್ಷಸರು ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. ಮತ್ತೆ ನಾನು ಈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲೇ ಕಾಣಿಸಿಕೊಂಡಿದ್ದೇನೆ ಎಂದರು.
ಈ ಚಿತ್ರವನ್ನು ರಜತ್ ನಿರ್ದೇಶನ ಮಾಡಿದ್ದು, ಅಜಯ್ ಕುಮಾರ್ ಕತೆ ಹೆಣೆದಿದ್ದಾರೆ. ಅಜಯ ಕುಮಾರ್ ಮಾತನಾಡಿ, ಇಷ್ಟು ದಿನ ನಾನು ಸೆಂಟಿಮೆಂಟ್ ಕಥೆಗಳನ್ನು ಬರೆಯುತ್ತಿದ್ದೆ. ಈ ಬಾರಿ ಅದಕ್ಕೆ ವಿರುದ್ಧವಾಗಿ ಕ್ರೈಮ್, ಥ್ರಿಲ್ಲರ್, ಆ್ಯಕ್ಷನ್ ಕಥೆ ಮಾಡಿದ್ದೇನೆ. ಚಿತ್ರದಲ್ಲಿ ಹೆಚ್ಚು ಕ್ರೈಮ್ ತೋರಿಸಲಾಗಿದೆ. ಹಾಗಾಗಿ ಎಲ್ಲಾ ಭಾಷೆಗಳಲ್ಲೂ ಸೆನ್ಸಾರ್ ಮಂಡಳಿಯವರು ಕೆಲ ದೃಶ್ಯಗಳನ್ನು ತೆಗೆಯಲು ಹೇಳಿದರು. ಅದರಿಂದ ಸ್ವಲ್ಪ ವಿಳಂಬವಾಯಿತು. ಈಗ ಬಿಡುಗಡೆ ಹಂತಕ್ಕೆ ಬಂದಿದೆ. ನಮ್ಮ ಸುತ್ತಮುತ್ತ ನಡೆವ ಘಟನೆಗಳನ್ನೇ ತೆಗೆದುಕೊಂಡು ಕಥೆ ಮಾಡಿದ್ದೇವೆ ಎಂದು ಹೇಳಿದರು.
ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿರುವ ಥ್ರಿಲ್ಲರ್ ಮಂಜು ಮಾತನಾಡಿ, ಅದ್ಭುತವಾದ 8 ಆ್ಯಕ್ಷನ್‌ಗಳಿವೆ. ಇದರಲ್ಲಿ ಒಂದು ಗೀತೆಯನ್ನು ನಾನೇ ಕೊರಿಯೋಗ್ರಫಿ ಮಾಡಿದ್ದೇನೆ. ಇದೊಂದು ಮೆಸೇಜ್ ಇರುವಂತಹ ಸುಂದರ ಸಿನಿಮಾ. ನಾನು ಸಿನಿಮಾ ನೋಡಿದ್ದೇನೆ. ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.