ಸಿನಿಮಾ ತಾರೆಯರ ಮಕ್ಕಳು ಈ ಸಿನಿಮಾ ಎಂಬ ಕಲರ್ಫುಲ್ ದುನಿಯಾಗೆ ಬರೋದು ಹೊಸತೇನಲ್ಲ. ಚಿಕ್ಕ ವಯಸ್ಸಿನಲ್ಲೇ ಅಪ್ಪ, ಅಮ್ಮನಂತೆ ಹೀರೋ/ ಹೀರೋಯಿನ್ ಆಗುವ ಕನಸು ಕಂಡಿರುತ್ತಾರೆ. ಸುದೀಪ್, ಪ್ರೇಮ್, ಡಾ. ರಾಜ್ಕುಮಾರ್ ವಂಶದ ಕುಡಿಗಳು ಸೇರಿದಂತೆ ಅನೇಕ ನಟರ ಮಕ್ಕಳು ಬಣ್ಣದ ಲೋಕದಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ. ಈ ಸಾಲಿನಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲ ಮಗ ಕೂಡ ಸೇರಿಕೊಂಡಿದ್ದಾರೆ.
ಹೌದು. ಪ್ರೇಕ್ಷಕರ ಮುಖದಲ್ಲಿ ನಗೆ ಕಡಲನ್ನೇ ಹರಿಸುವ ಸಾಧು ಕೋಕಿಲ ಅವರ ಮಗ ಸುರಾಗ್ ಕೂಡ ಅಪ್ಪನ ಹಾದಿಯಲ್ಲೇ ನಡೆಯುತ್ತಿದ್ದಾರೆ. ಈಗಾಗಲೇ ಸಂಗೀತ ನಿರ್ದೇಶನಕ್ಕಿಳಿದಿರುವ ಸುರಾಗ್, ಕನ್ನಡದಲ್ಲಿ ಅತಿರಥ, ಶಿವಾರ್ಜುನ ಸಿನಿಮಾಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸದ್ಯ ಮತ್ತೊಂದು ಸಾಹಸಕ್ಕೆ ಜೂನಿಯರ್ ಸಾಧು ಕೋಕಿಲ ಮುಂದಾಗಿದ್ದಾರೆ.
ಕಾಲಿವುಡ್ ಖ್ಯಾತ ಹಾಸ್ಯ ನಟ ಯೋಗಿ ಬಾಬು ಸಿನಿಮಾಗೆ ಸುರಾಗ್ ಆಕ್ಷನ್ ಕಟ್ ಅಪ್ಪನ ಗರಡಿಯಲ್ಲಿ ಪಳಗಿರುವ ಸುರಾಗ್, ಅಪ್ಪನಂತೆಯೇ ನಿರ್ದೇಶಕರಾಗಲು ತಯಾರಿ ಮಾಡಿಕೊಂಡಿದ್ದಾರೆ. ಅದು ಕೂಡ ನಮ್ಮ ಕನ್ನಡ ಸಿನಿಮಾಗಲ್ಲ. ತಮಿಳು ಚಿತ್ರರಂಗದ ಬಹುಬೇಡಿಕೆಯ ಹಾಸ್ಯ ನಟರಾಗಿರುವ ಯೋಗಿ ಬಾಬು ಅವ್ರಿಗೆ ಸುರಾಗ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹೆಸರಿಡದ ಚಿತ್ರದ ಬಗ್ಗೆ ಹಾಗೂ ನಿರ್ದೇಶನಾಗಲು ಯಾರು ಸ್ಫೂರ್ತಿ? ಎಂಬ ವಿಚಾರವಾಗಿ ಸ್ವತಃ ಸುರಾಗ್ ಅವರೇ ಈಟಿವಿ ಭಾರತ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ:Toby: ಯಪ್ಪಾ! ಮೂಗುತಿ ಧರಿಸಿ 'ಟೋಬಿ' ಅವತಾರ ತಾಳಿದ ರಾಜ್ ಬಿ ಶೆಟ್ಟಿ
ಸುರಾಗ್ ಮಾತು..: "ಸಂಗೀತ ಅನ್ನೋದು ನಮ್ಮ ಕುಟುಂಬದಲ್ಲಿ ಬೆರೆತು ಹೋಗಿದೆ. ಆದರೆ ನಿರ್ದೇಶನ ಅನ್ನೋದು ನನ್ನ ಫ್ಯಾಷನ್. ನಾನು ಕಾಲೇಜಿನಲ್ಲಿ ಇರಬೇಕಾದ್ರೆ ಕಥೆಗಳನ್ನು ಬರೆದು, ನಾಟಕಗಳನ್ನು ಮಾಡಿಸುತ್ತಿದ್ದೆ. ನನಗೆ ನಮ್ಮ ತಂದೆ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಸರ್ ನಿರ್ದೇಶನದ ಶೈಲಿಯೇ ಸ್ಫೂರ್ತಿ. ನಾನು ಉಪೇಂದ್ರ ಸರ್ ಅವರ ಉಪ್ಪಿ 2 ಹಾಗೂ ಯುಐ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ" ಎನ್ನುತ್ತಾರೆ ಸುರಾಗ್.
ಕಾಲಿವುಡ್ ಖ್ಯಾತ ಹಾಸ್ಯ ನಟ ಯೋಗಿ ಬಾಬು ಸಿನಿಮಾಗೆ ಸುರಾಗ್ ಆಕ್ಷನ್ ಕಟ್ ಇನ್ನೂ ಯೋಗಿ ಬಾಬುಗೆ ಆಕ್ಷನ್ ಕಟ್ ಹೇಳುವ ಮೂಲಕ ಸುರಾಗ್ ಅವರು ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಸಿನಿಮಾವು ಕಾಮಿಡಿ ಕಮ್ ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ. ಈಗಾಗಲೇ 10 ದಿನಗಳ ಶೂಟಿಂಗ್ ಕೂಡ ಮುಕ್ತಾಯಗೊಂಡಿದ್ದು, ಉಮಾಶ್ರೀ, ಅವಿನಾಶ್ರಂತಹ ಅನುಭವಿ ಕಲಾವಿದರು ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣದಲ್ಲಿಯೂ ಭಾಗಿಯಾಗಿದ್ದಾರೆ.
ಅಂದಹಾಗೆ, ಈ ಸಿನಿಮಾವನ್ನು ಸುರಾಗ್ ಅವರ ಹೋಮ್ ಬ್ಯಾನರ್ ಲೂಪ್ ಎಂಟರ್‌ಟೈನ್‌ಮೆಂಟ್ ಸ್ಟುಡಿಯೋ ಅಡಿಯಲ್ಲೇ ನಿರ್ಮಾಣ ಮಾಡಲಾಗುತ್ತಿದೆ. ಈ ಕಾಮಿಡಿ ಥ್ರಿಲ್ಲರ್‌ನಲ್ಲಿ ಮೂರು ನಾಲ್ಕು ಮುಖ್ಯ ಪಾತ್ರಗಳಿವೆಯಂತೆ. ಈ ಸಿನಿಮಾವನ್ನು ತಮಿಳು ಹಾಗೂ ಕನ್ನಡ ಭಾಷೆಯಲ್ಲಿ ಸಿದ್ಧಗೊಳಿಸಲಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಚಿತ್ರೀಕರಣ ಮುಗಿದರೆ ಈ ವರ್ಷವೇ ಸುರಾಗ್ ನಿರ್ದೇಶನದ ಈ ಹೆಸರಿಡದ ಚಿತ್ರವನ್ನು ತೆರೆ ಮೇಲೆ ನೋಡಬಹುದಾಗಿದೆ.
ಇದನ್ನೂ ಓದಿ:ಬ್ರಿಟಿಷರನ್ನು ಗುಂಡಿಟ್ಟು ಕೊಂದ 'ಶಾನುಭೋಗರ ಮಗಳು' ರಾಗಿಣಿ ಪ್ರಜ್ವಲ್