ಮಾದಕವಸ್ತು ಸಾಗಣೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಏಪ್ರಿಲ್‌ನಲ್ಲಿ ಬಂಧನಕ್ಕೊಳಗಾದ ಬಾಲಿವುಡ್ ನಟಿ ಕ್ರಿಸನ್ನ್ ಪೆರೇರಾ ( Chrisann Pereira) ಅವರನ್ನು ಯುಎಇ ಅಧಿಕಾರಿಗಳು ಎಲ್ಲ ಆರೋಪಗಳಿಂದ ಮುಕ್ತಗೊಳಿಸಿದ್ದಾರೆ. ಟ್ರಾವೆಲ್ ಬ್ಲ್ಯಾಕ್ಲಿಸ್ಟ್ನಲ್ಲಿದ್ದ ನಟಿಯ ಹೆಸರನ್ನು ತೆಗೆದುಹಾಕಿ, ಮುಂಬೈಗೆ ಮರಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಬಾಲಿವುಡ್ ಸಿನಿಮಾಗಳಾದ ಸಡಕ್ 2 ಮತ್ತು ಬಾಟ್ಲಾ ಹೌಸ್ನಲ್ಲಿ ಕಾಣಿಸಿಕೊಂಡಿರುವ ನಟಿ ಬುಧವಾರ ತಡರಾತ್ರಿ ಮುಂಬೈಗೆ ಆಗಮಿಸಿದ್ದಾರೆ.
ಬಾಲಿವುಡ್ ನಟಿ ಕ್ರಿಸನ್ನ್ ಪೆರೇರಾ ಅವರ ಸಹೋದರ ಕೆವಿನ್ ಅವರು ವಿಮಾನ ನಿಲ್ದಾಣದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ನಟಿಯನ್ನು ಸ್ವಾಗತಿಸುತ್ತಿರುವ ಮತ್ತು ಅಪ್ಪಿಕೊಳ್ಳುತ್ತಿರುವ ದೃಶ್ಯ ಇದಾಗಿದೆ. "ಕ್ರಿಸನ್ನ್ ಪೆರೇರಾ ಹಿಂತಿರುಗಿ ನಮ್ಮೊಂದಿಗೆ ಸೇರಿಕೊಂಂಡಿದ್ದಾರೆ. ಅವರು ಜೂನ್‌ನಲ್ಲಿ ಹಿಂತಿರುಗುತ್ತಾರೆ ಎಂದು ನಾನು ನಿಮಗೆ ತಿಳಿಸಿದ್ದೆ. ಆದರೆ ಪ್ರಕರಣ ಅದಕ್ಕಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡಿತು. ಸಹೋದರಿ ಅಂತಿಮವಾಗಿ ಹಿಂತಿರುಗಿದ್ದಾರೆ" ಎಂದು ಸಹೋದರ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಕ್ರಿಸನ್ನ್ ಪೆರೇರಾ ಅವರು ಏಪ್ರಿಲ್‌ನಲ್ಲಿ ಶಾರ್ಜಾದಲ್ಲಿದ್ದರು. ಮೂರು ವಾರಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದ ಅವರಿಗೆ ಜಾಮೀನು ನೀಡಲಾಯಿತು. ಅಂತಿಮವಾಗಿ ನಟಿಯನ್ನು ಖುಲಾಸೆಗೊಳಿಸಲಾಯಿತು. ಆದರೆ, ಕಾನೂನು ಪ್ರಕ್ರಿಯೆಗಳ ಕಾರಣ ಆ ಕೂಡಲೇ ಮುಂಬೈಗೆ ಮರಳಲು ಸಾಧ್ಯವಾಗಲಿಲ್ಲ. ವಿಳಂಬದ ಪರಿಣಾಮ, ನಟಿಯ ಮಾನಸಿಕ ಆರೋಗ್ಯದ ಬಗ್ಗೆ ಕುಟುಂಬಸ್ಥರು ಕಳವಳ ವ್ಯಕ್ತಪಡಿಸಿದ್ದರು.