ಕರ್ನಾಟಕ

karnataka

ETV Bharat / entertainment

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಹೆಸರು ಕೈಬಿಡುವಂತೆ ಕೋರ್ಟ್​ ಮೆಟ್ಟಿಲೇರಿದ ಜಾಕ್ವೆಲಿನ್ - ಈಟಿವಿ ಭಾರತ ಕನ್ನಡ

ಆರೋಪಿ ಸುಕೇಶ್ ಚಂದ್ರಶೇಖರ್ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ಇಡಿ ದಾಖಲಿಸಿರುವ ಎಫ್​ಐಆರ್​ ಅನ್ನು ರದ್ದುಗೊಳಿಸುವಂತೆ ಕೋರಿ ನಟಿ ಜಾಕ್ವೆಲಿನ್​ ಫರ್ನಾಂಡೀಸ್​ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.

Rs 200 crore ED case Jacqueline moves Delhi HC seeks quashing of FIR proceedings
ಜಾಕ್ವೆಲಿನ್

By ETV Bharat Karnataka Team

Published : Dec 19, 2023, 7:51 PM IST

ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡೀಸ್​ ಅವರು ಇಡಿ ವಿರುದ್ಧ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಆರೋಪಿ ಸುಕೇಶ್ ಚಂದ್ರಶೇಖರ್ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿರುವ ಎಫ್​ಐಆರ್​ ಮತ್ತು ಪೂರಕ ಆರೋಪಪಟ್ಟಿಯನ್ನು ರದ್ದುಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದಾರೆ.

ಆರೋಪಿ ಸುಕೇಶ್​ ಚಂದ್ರಶೇಖರ್​ಗೆ​ ತಾನು ಯಾವುದೇ ರೀತಿಯಲ್ಲಿ ಸಹಾಯ ಮಾಡಿಲ್ಲ. ಅಷ್ಟಕ್ಕೂ ಈ ಪ್ರಕರಣದಲ್ಲಿ ಜಾಕ್ವೆಲಿನ್​ ಅವರನ್ನು ಸಾಕ್ಷಿಯಾಗಿ ಹೆಸರಿಸಲಾಗಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ವಂಚನೆಯಿಂದ ಹಣ ಗಳಿಸುವಲ್ಲಿ ಸುಕೇಶ್​ ಮಾಡಿದ ಅಪರಾಧಗಳಲ್ಲಿ ಜಾಕ್ವೆಲಿನ್​ ಫರ್ನಾಂಡೀಸ್​ ಅವರ ಪಾತ್ರವಿಲ್ಲ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್​ 3 ಮತ್ತು 4ರಲ್ಲಿ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಸುಕೇಶ್ ಚಂದ್ರಶೇಖರ್​ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ಈ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಸುಕೇಶ್​ಗೆ ಸಂಬಂಧಿಸಿದ ಈ ಪ್ರಕರಣವನ್ನು ಇಡಿ, ದೆಹಲಿ ಪೊಲೀಸರು ಮತ್ತು ಆರ್ಥಿಕ ಅಪರಾಧ ವಿಭಾಗ ತನಿಖೆ ನಡೆಸುತ್ತಿದ್ದು, ಆತ ಇತರ ಹಲವು ಪ್ರಕರಣಗಳಲ್ಲಿ ಸಹ ಆರೋಪಿಯಾಗಿದ್ದಾನೆ.

ಪ್ರಕರಣದ ತನಿಖೆ ವೇಳೆ ಹಲವು ಬಾಲಿವುಡ್ ನಟಿಯರ ಹೆಸರುಗಳು ಕೂಡ ಈಗಾಗಲೇ ಬಯಲಿಗೆ ಬಂದಿವೆ. ಇವರಲ್ಲಿ ಮುಖ್ಯವಾಗಿ ನಟಿ ನೋರಾ ಫತೇಹಿ ಮತ್ತು ಜಾಕ್ವೆಲಿನ್ ಫರ್ನಾಂಡೀಸ್​ ಸಹ ಸೇರಿದ್ದಾರೆ. ಆದರೆ, ಜಾಕ್ವೆಲಿನ್ ನಿರಪರಾಧಿ ಎಂದು ಸುಕೇಶ್ ಈಗಾಗಲೇ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾನೆ. ಅವರು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಸುಕೇಶ್ ಈ ಹಿಂದೆಯೇ ನ್ಯಾಯಾಲಯಕ್ಕೆ ತಿಳಿಸಿದ್ದಾನೆ.

ಆದರೂ ಕೂಡ ನಟಿಯ ವಿರುದ್ಧ ಇಡಿ ಎಫ್​ಐಆರ್​ ದಾಖಲಿಸಿದೆ. ಅಲ್ಲದೇ, ನಟಿ ನೋರಾ ಫತೇಹಿ ಅವರ ಕುಟುಂಬದ ಸದಸ್ಯರು ಸುಕೇಶ್ ಚಂದ್ರಶೇಖರ್ ಅವರಿಂದ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ಪಡೆದಿದ್ದಾರೆ ಎಂಬುದಕ್ಕೆ ದಾಖಲೆ ಇದೆ. ಇದರ ಹೊರತಾಗಿಯೂ ಜಾರಿ ನಿರ್ದೇಶನಾಲಯ ನೋರಾ ಫತೇಹಿ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಈ ಬಗ್ಗೆಯೂ ಅರ್ಜಿಯಲ್ಲಿ ಉಲ್ಲೇಖಿಸಿರುವ ಜಾಕ್ವೆಲಿನ್​, ಇಡಿ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಪ್ರಕರಣದ ವಿವರ: ರೆಲಿಗೇರ್ ಎಂಟರ್‌ಪ್ರೈಸಸ್‌ನ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಿಂದ ವಂಚನೆ ಮತ್ತು ಸುಲಿಗೆ ಮಾಡಿದ ಆರೋಪ ಹೊತ್ತಿರುವ ಸುಕೇಶ್ ಚಂದ್ರಶೇಖರ್ ವಿರುದ್ಧ ದೆಹಲಿ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿ ಪ್ರಕರಣ ದಾಖಲಿಸಿದೆ. ರೆಲಿಗೇರ್ ಫಿನ್‌ವೆಸ್ಟ್ ಲಿಮಿಟೆಡ್‌ನಲ್ಲಿ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಕೇಶ್​ನನ್ನು ಅಕ್ಟೋಬರ್ 2019 ರಲ್ಲಿ ಬಂಧಿಸಲಾಗಿತ್ತು.

ಇದನ್ನೂ ಓದಿ:ಬೇಬಿ ನಿನಗಿಂತ ಸುಂದರವಾಗಿರುವವರು ಯಾರೂ ಇಲ್ಲ, ನನ್ನ ಬೊಮ್ಮಾ.. ನಟಿ ಜಾಕ್ವೆಲಿನ್​ಗೆ ಜೈಲಿನಿಂದಲೇ ಮತ್ತೆ ಪ್ರೇಮಪತ್ರ ಬರೆದ ಸುಕೇಶ್ ಚಂದ್ರಶೇಖರ್

ABOUT THE AUTHOR

...view details