ಸೌತ್ ಸಿನಿಮಾ ರಂಗದ ಮೆಗಾ ಬ್ಲಾಕ್‌ಬಸ್ಟರ್ ಚಿತ್ರ ಆರ್‌ಆರ್‌ಆರ್ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಸೂಪರ್ ಸ್ಟಾರ್ಗಳಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅಭಿನಯಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. 1,200 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿರುವ ಈ ಚಿತ್ರ ಈಗಲೂ ಥಿಯೇಟರ್ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ವಿದೇಶದಲ್ಲಿ ನಮ್ಮ ಸೌತ್ ಸಿನಿಮಾ ಮೇಲಿನ ನಿರೀಕ್ಷೆ ಎದ್ದು ಕಾಣುತ್ತಿದೆ.
ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಆರ್‌ಆರ್‌ಆರ್ ಮೋಡಿ:ದಕ್ಷಿಣ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ 'ಆರ್‌ಆರ್‌ಆರ್' ಚಿತ್ರ ಕಳೆದ ವರ್ಷ ಮಾರ್ಚ್ 25 ರಂದು ಬಿಡುಗಡೆ ಆಗಿತ್ತು. ಈ ಸಿನಿಮಾ ಮೂಲಕ ಇಬ್ಬರೂ ಸ್ಟಾರ್‌ಗಳು ವಿಶ್ವದಾದ್ಯಂತ ಪ್ರಸಿದ್ಧರಾಗಿದ್ದಾರೆ. ಅವರ ನಟನೆಗೆ ಪ್ರೇಕ್ಷಕ ಪ್ರಭುಗಳು ಭೇಷ್ ಎನ್ನುತ್ತಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಶಂಸೆ ಗಳಿಸುತ್ತಿರುವ ಆರ್‌ಆರ್‌ಆರ್ ಚಿತ್ರವು ಜನವರಿ 9 ರಂದು ಲಾಸ್ ಏಂಜಲೀಸ್ (USA) ನಲ್ಲಿರುವ TCL's Chinese Theaters ನಲ್ಲಿ ಬಿಡುಗಡೆಯಾಗಲಿದೆ. ಅಚ್ಚರಿಯ ಸಂಗತಿ ಎಂದರೆ ಕೇವಲ 98 ಸೆಕೆಂಡ್ಗಳಲ್ಲಿ ಚಿತ್ರದ ಎಲ್ಲ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ.
98 ಸೆಕೆಂಡುಗಳಲ್ಲಿ ಟಿಕೆಟ್ ಸೋಲ್ಡ್ ಔಟ್: ವರದಿಗಳ ಪ್ರಕಾರ, ವಿಶ್ವದ ಅತಿದೊಡ್ಡ IMAX ಚೈನೀಸ್ ಥಿಯೇಟರ್‌ನ ಆರ್‌ಆರ್‌ಆರ್ ಪ್ರದರ್ಶನದ ಎಲ್ಲ ಟಿಕೆಟ್‌ಗಳು ಕೇವಲ 98 ಸೆಕೆಂಡುಗಳಲ್ಲಿ ಮಾರಾಟವಾಗಿವೆ. ಬಿಯಾಂಡ್ ಫೆಸ್ಟ್‌ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಈ ಮಾಹಿತಿಯು ಮುನ್ನೆಲೆಗೆ ಬಂದಿದೆ. 'ಸಿನಿಮಾ ಪ್ರಪಂಚದ ಇತಿಹಾಸದಲ್ಲಿ ಯಾವುದೇ ಭಾರತೀಯ ಚಿತ್ರಕ್ಕೆ ಇದು ಸಂಭವಿಸಿರಲಿಲ್ಲ, ಇದು ಅಧಿಕೃತ ಮತ್ತು ಐತಿಹಾಸಿಕವಾಗಿದೆ, ಆರ್‌ಆರ್‌ಆರ್ ಟಿಕೆಟ್‌ಗಳು ಕೇವಲ 98 ಸೆಕೆಂಡುಗಳಲ್ಲಿ ಮಾರಾಟ ಆಗಿದೆ, ಈವರೆಗೆ ಯಾವುದೇ ಭಾರತೀಯ ಚಿತ್ರ ಇದನ್ನು ಮಾಡಿಲ್ಲ, ಏಕೆಂದರೆ ಆರ್‌ಆರ್‌ಆರ್‌ನಂತಹ ಚಿತ್ರ ಹಿಂದೆಂದೂ ನಿರ್ಮಾಣವಾಗಿಲ್ಲ, ಎಸ್‌ಎಸ್ ರಾಜಮೌಳಿ ಅವರಿಗೆ ಧನ್ಯವಾದಗಳು' ಎಂದು ಟ್ವೀಟ್ ಮಾಡಿದೆ.