ಸಿನಿಮಾ ರಂಗದಲ್ಲೀಗ ಆರ್ಆರ್ಆರ್ ಚಿತ್ರದ್ದೇ ಸದ್ದು. ಈಗಾಗಲೇ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಆರ್ಆರ್ಆರ್ ಚಿತ್ರದ ಗಮನ ಈಗ ಆಸ್ಕರ್ ಮೇಲಿದೆ. ಇದೇ ಮಾರ್ಚ್ 12ರಂದು ಆಸ್ಕರ್ 2023 ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಇಂದು ಅಮೆರಿಕದಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ.
ಲಾಸ್ ಏಂಜಲೀಸ್‌ನ (ಯುಎಸ್‌ಎ) 'ದಿ ಥಿಯೇಟರ್ ಅಟ್ ಏಸ್ ಹೋಟೆಲ್'ನಲ್ಲಿ (the theatre at ace hotel) ಚಿತ್ರ ಪ್ರದರ್ಶನಗೊಳ್ಳಲಿದೆ. ಆರ್ಆರ್ಆರ್ ಶೋ ಇಂದು (ಮಾರ್ಚ್ 1, 2023) ಸಂಜೆ 7.30ಕ್ಕೆ (ಲಾಸ್ ಏಂಜಲೀಸ್ ಸಮಯ) ನಡೆಯಲಿದೆ. 'ದಿ ಥಿಯೇಟರ್ ಅಟ್ ಏಸ್ ಹೋಟೆಲ್' 1,647 ಆಸನ ಸಾಮರ್ಥ್ಯವುಳ್ಳ ಚಿತ್ರಮಂದಿರ ಆಗಿದ್ದು, ಟಿಕೆಟ್ಗಳು ಕ್ಷಣಾರ್ಧದಲ್ಲಿ ಸೋಲ್ಡ್ ಔಟ್ ಆಗಿದೆ. ಇಂದು ಸಂಜೆ ಆರ್ಆರ್ಆರ್ ಸಿನಿಮಾ ಪ್ರದರ್ಶನವು ಪ್ರೇಕ್ಷಕರ ಸಿಳ್ಳೆ, ಚಪ್ಪಾಳೆಗೆ ಸಾಕ್ಷಿ ಆಗಲಿದೆ. ಭಾರತದ ಕಾಲಮಾನದ ಪ್ರಕಾರ ಈ ಆರ್ಆರ್ಆರ್ ಪ್ರದರ್ಶನವು ಸಂಜೆ 6 ಗಂಟೆಗೆ ನಡೆಯಲಿದೆ.
ಸೌತ್ ಸೂಪರ್ ಹಿಟ್ ಸಿನಿಮಾ 'ಬಾಹುಬಲಿ' ಖ್ಯಾತಿಯ ನಿರ್ದೇಶಕ ಎಸ್‌ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ ಆರ್ಆರ್ಆರ್ ಸಿನಿಮಾ ಕಳೆದ ಮಾರ್ಚ್ 25ರಂದು ತೆರೆಕಂಡಿತು. ಈ ಮಾರ್ಚ್ 25ಕ್ಕೆ ಒಂದು ವರ್ಷ ಪೂರೈಸಲಿದೆ. ಈ ಚಿತ್ರದಲ್ಲಿ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಪಾತ್ರ ಇದ್ದು, ರಾಮ್ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಆಲಿಯಾ ಭಟ್, ಅಜಯ್ ದೇವಗನ್ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಕಥೆ 1,200 ಕೋಟಿ ರೂಪಾಯಿಗೂ ಹೆಚ್ಚು ಸಂಗ್ರಹ ಮಾಡಿದೆ.
ಅಮೆರಿಕದ ಥಿಯೇಟರ್ನಲ್ಲಿಂದು ಆರ್ಆರ್ಆರ್ ಶೋ ಇದನ್ನೂ ಓದಿ:ಆಸ್ಕರ್ನಲ್ಲೂ ನಾಟು ನಾಟು ರಂಗು.. ವೇದಿಕೆಯಲ್ಲಿ ಮೊಳಗಲಿದೆ ಕಾಲಭೈರವ, ರಾಹುಲ್ ಗಾಯನ
ಆಸ್ಕರ್ 2023 ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಮಾರ್ಚ್ 12ರಂದು ಅಮೆರಿಕದಲ್ಲಿ ನಡೆಯಲಿದೆ. ನಾಟು ನಾಟು ಹಾಡು 95ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ (ಆಸ್ಕರ್ ಪ್ರಶಸ್ತಿ) ಅತ್ಯುತ್ತಮ ಗೀತೆ ವಿಭಾಗದಲ್ಲಿ ನಾಮಿನೇಟ್ ಆಗಿದೆ. ಸದ್ಯ ಎಲ್ಲರ ಗಮನ ಆಸ್ಕರ್ನತ್ತ ಇದೆ. ಇನ್ನೂ ಆಸ್ಕರ್ ಸಮಾರಂಭದಲ್ಲಿ ನಾಟು ನಾಟು ಹಾಡಿನ ಪ್ರದರ್ಶನ ಇರುತ್ತದೆ. ಕಾಲಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಆಸ್ಕರ್ ವೇದಿಕೆಯಲ್ಲಿ ನಾಟು ನಾಟು ಹಾಡು ಹಾಡಲಿದ್ದು, ರಾಮ್ಚರಣ್ ಮತ್ತು ಜೂನಿಯರ್ ಎನ್ಟಿಆರ್ ಡ್ಯಾನ್ಸ್ ಮಾಡಲಿ ಅನ್ನೋದು ಅಭಿಮಾನಿಗಳ ಆಶಯ.
ಇದನ್ನೂ ಓದಿ:ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೂ.ಎನ್ಟಿಆರ್ ಅನುಪಸ್ಥಿತಿ: ಹೆಚ್‌ಸಿಎ ಸ್ಪಷ್ಟನೆ ಹೀಗಿದೆ!
ಇನ್ನು, ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ (ಹೆಚ್‌ಸಿಎ) ಪ್ರಶಸ್ತಿ ಸಮಾರಂಭದಲ್ಲಿ ಆರ್ಆರ್ಆರ್ ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಆದ್ರೆ ಜೂನಿಯರ್ ಎನ್ಟಿಆರ್ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಈ ಬಗ್ಗೆ ಹೆಚ್‌ಸಿಎ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ. ''ನಟ ಜೂನಿಯರ್ ಎನ್ಟಿಆರ್ ಅವರನ್ನು ನಾವು ಆಹ್ವಾನಿಸಿದ್ದೇವೆ. ಆದರೆ ಭಾರತದಲ್ಲಿ ತಮ್ಮ ಮುಂದಿನ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವುದರಿಂದ ಈ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಶೀಘ್ರದಲ್ಲೇ ಅವರು ನಮ್ಮಿಂದ ತಮ್ಮ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು" ಎಂದು ಹೆಚ್‌ಸಿಎ ತಿಳಿಸಿದೆ.