ಟಾಲಿವುಡ್ನ ಖ್ಯಾತ ಚಿತ್ರಕಥೆಗಾರ ಹಾಗೂ ರಾಜ್ಯಸಭಾ ಸದಸ್ಯ ವಿಜಯೇಂದ್ರ ಪ್ರಸಾದ್ ಅವರು ಪೂರ್ಣ ಪ್ರಮಾಣದಲ್ಲಿ ಎಡಿಟಿಂಗ್ ಆದ 'ಎಮರ್ಜೆನ್ಸಿ' (Emergency) ಸಿನಿಮಾ ನೋಡಿ ತಮ್ಮ ಬಗ್ಗೆ ಶ್ಲಾಘಿಸಿರುವುದಾಗಿ ಬಾಲಿವುಡ್‌ನ ಫೈರ್ ಬ್ರ್ಯಾಂಡ್ ಕಂಗನಾ ರಣಾವತ್ ಹೇಳಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನನ್ನ ಈ ಜೀವನಕ್ಕೆ ಅವರ ಹೊಗಳಿಕೆಯೇ ಸಾಕು ಎಂದು ಭಾವುಕರಾಗಿದ್ದಾರೆ. ತಮ್ಮ ನಿರ್ದೇಶನದ ಮುಂಬರುವ 'ಎಮರ್ಜೆನ್ಸಿ' ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಸಂಪೂರ್ಣ ಎಡಿಟಿಂಗ್ ಆದ ಮೊದಲ ಕಾಪಿಯನ್ನು ಅವರಿಗೆ ತೋರಿಸಲಾಯಿತು. ಸಿನಿಮಾ ನೋಡುತ್ತಿದ್ದಾಗ ಅವರ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಹಲವು ಬಾರಿ ಕಣ್ಣೊರೆಸಿಕೊಂಡಿದ್ದನ್ನು ನಾನು ಕಂಡೆ. ಚಿತ್ರ ವೀಕ್ಷಿಸಿದ ಬಳಿಕ ನನ್ನನ್ನು ಕರೆದು ನನ್ನ ಅಭಿನಯವನ್ನು ಕೊಂಡಾಡಿದರು.
ಇದನ್ನೂ ಓದಿ:ಹೈದರಾಬಾದ್ ವಿರುದ್ಧ 'ವಿರಾಟ್' ಪ್ರದರ್ಶನ: ಪತಿಯ ಸಾಧನೆ ಕೊಂಡಾಡಿದ ಅನುಷ್ಕಾ ಶರ್ಮಾ
ಅಲ್ಲದೇ ನಿಮ್ಮ ಬಗ್ಗೆ ನಾನು ಹೆಮ್ಮೆಪಡುತ್ತೇನೆ ಎಂದು ಮೆಚ್ಚುಗೆಯ ಮಾತುಗಳನ್ನು ಕೂಡ ಆಡಿದರು. ಅವರ ಹೊಗಳಿಕೆ ಈ ಜನ್ಮಕ್ಕೆ ಸಾಕು ಎಂದು ಕಂಗನಾ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಅವರ ಹೊಗಳಿಕೆಯಿಂದ ನನ್ನ ಮನಸ್ಸು ತುಂಬಿದೆ. ನನ್ನ ಗುರುಗಳು ಮತ್ತು ಹಿತೈಷಿಗಳ ಆಶೀರ್ವಾದದಿಂದ 'ಎಮರ್ಜೆನ್ಸಿ' (Emergency) ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ತಲುಪಿದೆ. ಶೀಘ್ರದಲ್ಲೇ ಬಿಡುಗಡೆ ದಿನಾಂಕ ಪ್ರಕಟಿಸುತ್ತೇವೆ ಎಂದೂ ಕೂಡ ಕಂಗನಾ ತಿಳಿಸಿದ್ದಾರೆ.
‘ಮಣಿಕರ್ಣಿಕಾ’ ಚಿತ್ರದ ಸಂದರ್ಭದಲ್ಲಿ ಕಂಗನಾ ರಣಾವತ್ ಅವರು ವಿಜಯೇಂದ್ರ ಪ್ರಸಾದ್ ಅವರ ಜೊತೆ ಕೆಲಸ ಮಾಡಿದ್ದಾರೆ. ಹಾಗಾಗಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. 'ಎಮರ್ಜೆನ್ಸಿ' ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಯಾಗಿರುವ ತಾರೆ, ನಿರ್ದೇಶನದ ಜೊತೆಗೆ ನಿರ್ಮಾಪಕಿ ಆಗಿಯೂ ಗುರುತಿಸಿಕೊಂಡಿದ್ದಾರೆ.
ದಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ರಾಜಕೀಯ ಜೀವನಾಧಾರಿತ ಕಥೆ ಇದಾಗಿದ್ದು ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ಕಾಣಿಸಿಕೊಳ್ಳಲಿದ್ದಾರೆ. ಜಯಪ್ರಕಾಶ್ ನಾರಾಯಣ್ ಪಾತ್ರದಲ್ಲಿ ಅನುಪಮ್ ಖೇರ್ ನಟಿಸಿದ್ದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾತ್ರದಲ್ಲಿ ಶ್ರೇಯಸ್ ತಲ್ಪಾಡೆ ನಟಿಸಿದ್ದಾರೆ. ಇವರೊಂದಿಗೆ ಮಿಲಿಂದ್ ಸೋಮನ್, ಸತೀಶ್ ಕೌಶಿಕ್, ಮಹಿಮಾ ಚೌಧರಿ ಸೇರಿದಂತೆ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ. ಚಿತ್ರದ ಬಗ್ಗೆ ಬಾಲಿವುಡ್ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ.
ಕಂಗನಾ ನಟನೆಯ ಚಂದ್ರಮುಖಿ-2 ಕೂಡ ಬಿಡುಗಡೆಗೆ ಸಿದ್ಧವಾಗಿದೆ. ರಜನಿಕಾಂತ್ ನಟನೆಯ ಚಂದ್ರಮುಖಿ ಚಿತ್ರದ ಮುಂದುವರಿದ ಭಾಗ ಇದಾಗಿದ್ದು ಚಿತ್ರದಲ್ಲಿ ರಾಘವ ಲಾರೆನ್ಸ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಪಿ.ವಾಸು ನಿರ್ದೇಶನದ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ.
ಇದನ್ನೂ ಓದಿ:ಸಮಾಜಮುಖಿ ಕೆಲಸಗಳ ಮೂಲಕ ಬರ್ತ್‌ಡೇ ಆಚರಿಸಲು ಮುಂದಾದ ನಟಿ ರಾಗಿಣಿ
ಕಂಗನಾ ನಟನೆಯ ಇತ್ತೀಚೆಗೆ ತೆರೆಕಂಡ ಕೆಲವು ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುವಲ್ಲಿ ಸೋತಿವೆ. 2019 ರಲ್ಲಿ ತೆರೆಕಂಡ 'ಮಣಿಕರ್ಣಿಕಾ' ಚಿತ್ರವೇ ಅವರಿಗೆ ಹಿಟ್ ನೀಡಿದ ಕೊನೆಯ ಚಿತ್ರವಾಗಿದೆ. 'ಜಡ್ಜ್‌ಮೆಂಟಲ್ ಹೈ ಕ್ಯಾ' ಪಂಗಾ, ತಲೈವಿ, ಧಾಕಡ್ ಚಿತ್ರ ಅಷ್ಟಾಗಿ ಸದ್ದು ಮಾಡದಿರುವುದು ಅಭಿಮಾನಿಗಳಿಗೆ ನಿರಾಸೆ ತರಿಸಿದೆ. ಹಾಗಾಗಿ ಮುಂಬರುವ ಚಿತ್ರಗಳ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ.