ನಿರೀಕ್ಷೆಯಂತೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಪಡೆದುಕೊಂಡು, ಭಾರತವನ್ನು ಸಂಭ್ರಮದ ಅಲೆಯಲ್ಲಿ ತೇಲಿಸಿದೆ. ಎರಡೂವರೆ ದಶಕಗಳಿಂದ ಸಿನಿ ಜಗತ್ತಿನಲ್ಲಿ ಪಯಣಿಸುತ್ತಿರುವ ಚಂದ್ರಬೋಸ್ ಸಹಸ್ರಾರು ಹಾಡುಗಳನ್ನು ಕೇಳುಗರಿಗೆ ತಲುಪಿಸಿದ್ದಾರೆ. ಆರ್‌ಆರ್‌ಆರ್ ಚಿತ್ರದಲ್ಲಿನ ಸೂಪರ್ ಹಿಟ್ ನಾಟು ನಾಟು ಹಾಡಿನ ಮೂಲಕ ಅವರ ಹೆಸರು ವಿಶ್ವಾದ್ಯಂತ ಪ್ರಸಿದ್ಧವಾಯಿತು. ಆಸ್ಕರ್ ಪ್ರಶಸ್ತಿ ಸ್ವೀಕರಿಸಿರುವ ಚಂದ್ರಬೋಸ್ ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಆಸ್ಕರ್ ವೇದಿಕೆಯನ್ನೇರಿದಾಗ ನಿಮಗೆ ಹೇಗನಿಸಿತು?ಭಾರತದ ಕೀರ್ತಿ ಮತ್ತು ತೆಲುಗು ಸಾಹಿತ್ಯದ ಗೌರವವನ್ನು ಕೈಯಲ್ಲಿಟ್ಟುಕೊಂಡಂತೆ ಭಾಸವಾಯಿತು. ಆ ಕ್ಷಣಗಳು ವರ್ಣನಾತೀತ. ಗೋಲ್ಡನ್ ಗ್ಲೋಬ್ ಸೇರಿದಂತೆ ಮತ್ತಿತರ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದಾಗ ಆಸ್ಕರ್ ಕೂಡ ಖಚಿತ ಎಂಬ ಭರವಸೆ ಇತ್ತು. ಅದು ಸಾಕಾರಗೊಂಡ ಆ ಕ್ಷಣ ಭಾವನಾತ್ಮಕ ಸಮಯ ಎಂದರು.
ಎಂದಾದರೂ ಆಸ್ಕರ್ ಕನಸು ಕಂಡಿದ್ರಾ?ನನಗೆ ಆಸ್ಕರ್ ಬಗ್ಗೆ ಯಾವುದೇ ಐಡಿಯಾ ಇರಲಿಲ್ಲ. ಆದರೆ, ರಾಷ್ಟ್ರ ಪ್ರಶಸ್ತಿ ಬಗ್ಗೆ ಸಾಕಷ್ಟು ಕನಸು ಕಂಡಿದ್ದೆ. ಒಮ್ಮೆಯಾದರೂ ರಾಷ್ಟ್ರ ಪ್ರಶಸ್ತಿ ಪಡೆಯಬೇಕೆಂಬುದು ನನ್ನ ಜೀವನದ ಗುರಿ ಮತ್ತು ಕನಸಾಗಿತ್ತು. ಆಸ್ಕರ್ ಸಾಧಿಸುವ ಮೊದಲು ನಾಲ್ಕು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಯಿತು. ಗೋಲ್ಡನ್ ಗ್ಲೋಬ್, ಕ್ರಿಟಿಕ್ಸ್ ಚಾಯ್ಸ್, ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ನಂತರ ಆಸ್ಕರ್ ಪ್ರಶಸ್ತಿ ಲಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಆಸ್ಕರ್ ಸಿಕ್ಕಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು? ಈ ಬಾರಿ ಸಾಹಿತ್ಯದ ಜೊತೆಗೆ ತಾಳ್ಮೆಗೂ ಸಿಕ್ಕ ಪ್ರಶಸ್ತಿ ಎಂದು ಪರಿಗಣಿಸಿದ್ದೇನೆ. ನನ್ನ 27 ವರ್ಷಗಳ ಬರವಣಿಗೆಯ ಪಯಣದಲ್ಲಿ, 19 ತಿಂಗಳ ಸಮಯದಲ್ಲಿ ನಾನು ಯಾವ ಹಾಡನ್ನು ಬರೆದಿಲ್ಲ. ಯಾವುದೇ ಹಾಡನ್ನು ನಾಲ್ಕೈದು ದಿನಗಳಲ್ಲಿ ಮುಗಿಸಬೇಕು. ಬಹಳ ಎಂದರೆ ಒಂದು ತಿಂಗಳು. ಆದರೆ ನಾಟು ನಾಟು ಹಾಡನ್ನು ಪೂರ್ಣಗೊಳಿಸಲು 19 ತಿಂಗಳು ಬೇಕಾಯಿತು. ತಾಳ್ಮೆ ಕಳೆದುಕೊಳ್ಳದೇ ಕುಳಿತು ಪ್ರತೀ ಪದವನ್ನೂ ಬಹಳ ಜಾಗರೂಕತೆಯಿಂದ ಬರೆದೆ. ಹಾಗಾಗಿ ಸಾಹಿತ್ಯದ ಜೊತೆಗೆ ತಾಳ್ಮೆಗೂ ಈ ಪ್ರಶಸ್ತಿ ಸಿಕ್ಕಂತಾಗಿದೆ ಎಂದು ತಿಳಿಸಿದರು.