ಸೌತ್ ಸ್ಟಾರ್ ಡೈರೆಕ್ಟರ್ ಎಸ್ಎಸ್ ರಾಜಮೌಳಿ ನಿರ್ದೇಶನದ, ಸೂಪರ್ ಸ್ಟಾರ್ಗಳಾದ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಆರ್ಆರ್ಆರ್ ಸಿನಿಮಾ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ.
ಇಂಗ್ಲಿಷ್ ಹೊರತಾದ ಸಿನಿಮಾಗಳಿಗೆ ನೀಡುವ ವಿಭಾಗದಲ್ಲಿ ಈ ಸಿನಿಮಾ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಹಾಗೂ ಅತ್ಯುತ್ತಮ ಗೀತೆ ವಿಭಾಗದಲ್ಲಿ ಈ ಚಿತ್ರ ನಾಮಿನೇಟ್ ಆಗಿದೆ. ತಮ್ಮ ಚಲನ ಚಿತ್ರವನ್ನು ಗುರುತಿಸಿದ್ದಕ್ಕಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭವನ್ನು ನಡೆಸುತ್ತಿರುವ ಹಾಲಿವುಡ್ ಫಾರಿನ್ ಪ್ರೆಸ್ ಅಸೋಸಿಯೇಷನ್ (HFPA)ಗೆ ನಿರ್ದೇಶಕ ರಾಜಮೌಳಿ ಅವರು ಧನ್ಯವಾದ ತಿಳಿಸಿದ್ದಾರೆ.
ಆರ್ಆರ್ಆರ್ ಚಿತ್ರವನ್ನು ಎರಡು ವಿಭಾಗಗಳಲ್ಲಿ ನಾಮ ನಿರ್ದೇಶನ ಮಾಡಿದ್ದಕ್ಕಾಗಿ ಧನ್ಯವಾದಗಳು. ಇಡೀ ತಂಡಕ್ಕೆ ಅಭಿನಂದನೆಗಳು. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಧನ್ಯವಾದಗಳು ಎಂದು ರಾಜಮೌಳಿ ಅವರು ಟ್ವಿಟರ್ನಲ್ಲಿ ಬರೆದಿದ್ದಾರೆ. ಉಳಿದಂತೆ ಆರ್ಆರ್ಆರ್ ಟ್ವಿಟರ್ ಪೇಜ್, ಚಿತ್ರದ ಕಲಾವಿದರು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸಂಜೆ ಗೋಲ್ಡನ್ ಗ್ಲೋಬ್ಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಪ್ರಕಟಣೆ ಹಂಚಿಕೊಂಡಿದೆ. 1920ರ ದಶಕದ ಭಾರತೀಯ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಸುತ್ತ ಹೆಣೆದ ಸ್ವಾತಂತ್ರ್ಯ ಪೂರ್ವದ ಕಾಲ್ಪನಿಕ ಕಥೆಯನ್ನು ಈ ಚಿತ್ರ ಅನುಸರಿಸುತ್ತದೆ.