2022ರ ಸೂಪರ್ ಹಿಟ್ ಚಿತ್ರ ಆರ್‌ಆರ್‌ಆರ್ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಬ್ಲಾಕ್ ಬಸ್ಟರ್ ಮೂವಿ ಎನಿಸಿಕೊಂಡಿದೆ. ಸೌತ್ ಸೂಪರ್ ಸ್ಟಾರ್ಗಳಾದ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಅಮೋಘವಾಗಿ ನಟಿಸಿ ಸಿನಿ ಪ್ರಿಯರಿಂದ ಮೆಚ್ಚುಗೆ ಗಳಿಸಿದ್ದರು. ಈ ಬಹು ಬೇಡಿಕೆ ನಟರ ಅತ್ಯುತ್ತಮ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. 1,200 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿರುವ ಈ ಚಿತ್ರ ಈಗಲೂ ಹಲವು ಥಿಯೇಟರ್ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಆರ್‌ಆರ್‌ಆರ್ ಮತ್ತಷ್ಟು ಅವಾರ್ಡ್ಸ್ಗೆ ನಾಮ ನಿರ್ದೇಶನಗೊಂಡಿದ್ದು, ಸೌತ್ ಸಿನಿಮಾ ಇಂಡಸ್ಟ್ರಿಯ ಹಿರಿಮೆ ಹೆಚ್ಚಿಸಿದೆ.
ಭಾರತದಲ್ಲಿ ಹಲವು ಪ್ರಶಸ್ತಿಗಳನ್ನು ಈಗಾಗಲೇ ಆರ್‌ಆರ್‌ಆರ್ ಗಳಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಎರಡು ಗೋಲ್ಡನ್ ಗ್ಲೋಬ್ ನಾಮ ನಿರ್ದೇಶನಗಳನ್ನು ಪಡೆದ ನಂತರ, ಆಸ್ಕರ್‌ನ ಪಟ್ಟಿಗೆ ಸೇರ್ಪಡೆಗೊಂಡ ನಂತರ ಆರ್‌ಆರ್‌ಆರ್ ಇದೀಗ ಪ್ರತಿಷ್ಠಿತ BAFTA ಪ್ರಶಸ್ತಿಗೆ ಆಯ್ಕೆ ಆಗಿದೆ. BAFTA 2023 ಪ್ರಶಸ್ತಿಗೆ ರೇಸ್‌ನಲ್ಲಿರುವ 10 ಚಲನಚಿತ್ರಗಳಲ್ಲಿ ಆರ್‌ಆರ್‌ಆರ್ ಕೂಡ ಒಂದು.
BAFTA ಪ್ರಶಸ್ತಿ: 2023ರ BAFTA ಚಲನಚಿತ್ರ ಪ್ರಶಸ್ತಿಗಳಿಗಾಗಿ ಎಲ್ಲಾ 24 ವಿಭಾಗಗಳಲ್ಲಿ ಮೊದಲ ಸುತ್ತಿನ ಮತದಾನದ ಫಲಿತಾಂಶಗಳನ್ನು ಬ್ರಿಟಿಷ್ ಅಕಾಡೆಮಿ ಪ್ರಕಟಿಸಿದೆ. ಆರಂಭಿಕ ಲಾಂಗ್ ಲಿಸ್ಟ್‌ನಲ್ಲಿ ಸ್ಟಾರ್ ಡೈರೆಕ್ಟರ್ ಎಸ್‌ಎಸ್ ರಾಜಮೌಳಿ ಅವರ 2022ರ ಬ್ಲಾಕ್‌ಬಸ್ಟರ್ 'RRR' ಸೇರಿದೆ. ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅಭಿನಯದ ಈ ಆ್ಯಕ್ಷನ್ ಚಿತ್ರವು ಚಲನಚಿತ್ರ ವಿಭಾಗಕ್ಕೆ ನಾಮನಿರ್ದೇಶನಗೊಂಡಿದೆ.
ಆರ್‌ಆರ್‌ಆರ್ ಟ್ವೀಟ್: ಲಾಂಗ್‌ಲಿಸ್ಟ್‌ನ ಘೋಷಣೆಯ ನಂತರ ಚಿತ್ರದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಚಿತ್ರತಂಡ ತನ್ನ ಕೃತಜ್ಞತೆ ವ್ಯಕ್ತಪಡಿಸಿದೆ. "ಆರ್‌ಆರ್‌ಆರ್ ಸಿನಿಮಾ BAFTA ಫಿಲ್ಮ್ ಅವಾರ್ಡ್ಸ್ ಲಾಂಗ್ ಲಿಸ್ಟ್‌ನಲ್ಲಿದೆ ಎಂದು ಘೋಷಿಸಲು ತುಂಬಾ ಸಂತೋಷವಾಗಿದೆ. ಎಲ್ಲರಿಗೂ ಧನ್ಯವಾದಗಳು'' ಎಂದು ಟ್ವೀಟ್ ಮಾಡಿದೆ.