'RRR' ಕಳೆದ ವರ್ಷ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದಲ್ಲದೇ, ತೆಲುಗು ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಿತು. ಒಂದು ವರ್ಷದ ಹಿಂದೆ, ಇದೇ ದಿನ ಈ ಸಿನಿಮಾ ಅದ್ಧೂರಿಯಾಗಿ ತೆರೆಕಂಡಿತ್ತು. ಚಿತ್ರ ಬಿಡುಗಡೆಗೊಂಡು ವರ್ಷ ಪೂರೈಸಿದೆ. ಆದ್ರೆ ಅಭಿಮಾನಿಗಳಲ್ಲಿ ಈ ಸಿನಿಮಾ ಮತ್ತು ನಾಟು ನಾಟು ಹಾಡಿನ ಕ್ರೇಜ್ ಕಿಂಚಿತ್ತೂ ಕಡಿಮೆಯಾಗಿಲ್ಲ. ಈಗಲೂ ಹೊಸ ಚಿತ್ರವನ್ನೇ ನೋಡಿದ ಅನುಭವ ಅಭಿಮಾನಿಗಳದ್ದು.
'RRR' - ರೌದ್ರಂ, ರಣಮ್ ಮತ್ತು ರುಧಿರಂ ಎಂದರ್ಥ. ಆದರೆ ಈ ಸಿನಿಮಾ ಜನಪ್ರಿಯತೆಯೊಂದಿಗೆ ಅದರರ್ಥ ರಾಜಮೌಳಿ, ರಾಮ್ ಚರಣ್ ಮತ್ತು ರಾಮರಾವ್ ಆಗಿಬಿಟ್ಟಿದೆ. ಈ ಮಟ್ಟಿನ ಖ್ಯಾತಿ ಗಿಟ್ಟಿಸಿಕೊಂಡಿರುವ ಈ ಸಿನಿಮಾ ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಭಾರತೀಯ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಎಸ್ಎಸ್ ರಾಜಮೌಳಿ ನಿರ್ದೇಶನ ಈ ಸಿನಿಮಾದಲ್ಲಿ ರಾಮ್ ಚರಣ್, ಜೂನಿಯರ್ ಎನ್ಟಿಆರ್ ಅಲ್ಲದೇ ಅಜಯ್ ದೇವ್ಗನ್ ಮತ್ತು ಆಲಿಯಾ ಭಟ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮುಖ್ಯಭೂಮಿಕೆಯಲ್ಲಿದ್ದ ಇಬ್ಬರು ನಟರ ಆ್ಯಕ್ಷನ್ ಸನ್ನಿವೇಶಗಳು ಮೈನವಿರೇಳಿಸುವಂತಿದ್ದು, ಕಳೆದ ವರ್ಷ ಸಾವಿರ ಕೋಟಿ ಕ್ಲಬ್ ಸೇರಿದ ಚಿತ್ರ ಇದಾಗಿದೆ.
ಆರ್ಆರ್ಆರ್ ಸಿನಿಮಾ ಪ್ರತಿಷ್ಠಿತ ಪ್ರಶಸ್ತಿಗಳು ಮತ್ತು ಫೇಮಸ್ ಸೆಲೆಬ್ರಿಟಿಗಳ ಪ್ರಶಂಸೆಗಳೊಂದಿಗೆ ಪ್ಯಾನ್-ವರ್ಲ್ಡ್ ಶ್ರೇಣಿಯನ್ನು ತಲುಪಿದೆ. ಹಾಲಿವುಡ್ನ ಜೇಮ್ಸ್ ಕ್ಯಾಮರಾನ್, ಸ್ಟೀವನ್ ಸ್ಪೀಲ್‌ಬರ್ಗ್ ಅವರಂತಹ ಸೆಲೆಬ್ರಿಟಿಗಳು ಸಹ ಚಲನಚಿತ್ರವನ್ನು ಮತ್ತು ಚಿತ್ರ ತಂಡವನ್ನು ಹೊಗಳಿದ ಸಂದರ್ಭಗಳಿವೆ. 'ನಾಟು ನಾಟು' ಹಾಡು ವಿಶ್ವ ಪ್ರತಿಷ್ಟಿತ ಆಸ್ಕರ್ ಗೆದ್ದ ನಂತರ ತೆಲುಗು ಚಿತ್ರರಂಗದ ಖ್ಯಾತಿ ಉತ್ತುಂಗಕ್ಕೇರಿತು. ಆಸ್ಕರ್ ಅಲ್ಲದೇ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನೂ ಸಹ ಗೆದ್ದುಕೊಂಡಿತು.