ಮುಂಬೈ (ಮಹಾರಾಷ್ಟ್ರ):2023ನೇ ಸಾಲಿನ ಆಸ್ಕರ್ ಪ್ರಶಸ್ತಿಯ ಅಂತಿಮ ನಾಮನಿರ್ದೇಶನ ಪಟ್ಟಿ ಬಹಿರಂಗಗೊಂಡಿದೆ. ಭಾರತದಿಂದ ಎಸ್.ಎಸ್.ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ತೆಲುಗು ಚಿತ್ರದ ‘ನಾಟು ನಾಟು’ ಹಾಡಿಗೆ ‘ಒರಿಜಿನಲ್ ಸಾಂಗ್’ (ಮೂಲ ಹಾಡು) ವಿಭಾಗದ ಪ್ರಶಸ್ತಿಗೆ ನಾಮಿನೇಟ್ ಆಗಿದೆ. ವ್ಯಾಪಕ ಜನಮೆಚ್ಚುಗೆ ಗಳಿಸಿದ ಈ ಹಾಡು ಮಂಗಳವಾರ ಅಧಿಕೃತ ಆಸ್ಕರ್ ನಾಮನಿರ್ದೇಶನಕ್ಕೆ ಬರುತ್ತಿದ್ದಂತೆ ಗಾಯಕ ಗುರು ರಾಂಧವಾ ಮತ್ತು ನಟಿ ಸಾಯಿ ಮಂಜ್ರೇಕರ್ ಸೇರಿದಂತೆ ಹಲವು ಗಣ್ಯರು ಚಿತ್ರತಂಡವನ್ನು ಅಭಿನಂದಿಸಿದ್ದಾರೆ.
"ಈ ವಿಷಯ ಎಲ್ಲರೂ ಖುಷಿ ಪಡುವಂಥದ್ದು. ಆಸ್ಕರ್ ಪ್ರಶಸ್ತಿಗೆ ‘ನಾಟು ನಾಟು’ ಹಾಡು ನಾಮಿನೇಟ್ ಆಗುತ್ತಿದ್ದಂತೆ ನಾನು ಟ್ವೀಟ್ ಮಾಡಿ ಚಿತ್ರತಂಡವನ್ನು ಅಭಿನಂದಿಸಿರುವೆ. ನಾನೊಬ್ಬ ಸಂಗೀತಗಾರ ಮತ್ತು ಕಲಾವಿದನಾಗಿದ್ದು ಇದು ನನಗೆ ಅತ್ಯಂತ ಹೆಮ್ಮೆಯ ವಿಷಯ. ಜಗತ್ತಿನ ಯಾವ ದೇಶಕ್ಕೆ ಕಾಲಿಟ್ಟರೂ ಅಲ್ಲಿ ಈ ಹಾಡು ಕೇಳಿ ಬರುತ್ತಿದೆ. ಇದೊಂದು ಇತಿಹಾಸ. ಚಿತ್ರತಂಡ ಇಂತಹ ಇತಿಹಾಸವನ್ನು ಸೃಷ್ಟಿಸಿದೆ. ಭವಿಷ್ಯದ ಪ್ರಾಜೆಕ್ಟ್‌ಗಳಿಗೆ ಶುಭವಾಗಲಿ" ಎಂದಿದ್ದಾರೆ.
"ಭಾರತವನ್ನು ವಿಶ್ವಾದ್ಯಂತ ಪ್ರಶಂಸಿಸಲಾಗುತ್ತಿದೆ. ಇದು ನಿಜವಾಗಿಯೂ ಆಸಕ್ತಿದಾಯಕ ವಿಚಾರ. ಹೇಳಿಕೊಳ್ಳಲಾಗದಷ್ಟು ಖುಷಿ ಆಗುತ್ತಿದೆ. ಮುಂಬರುವ ಚಿತ್ರಗಳಿಗೂ ಹೊಸ ಭರವಸೆ ತುಂಬಿದೆ. ಚಿತ್ರತಂಡಕ್ಕೆ ಶುಭವಾಗಲಿ" ಎಂದು ನಟಿ ಸಾಯಿ ಮಂಜ್ರೇಕರ್ ಖುಷಿ ವ್ಯಕ್ತಪಡಿಸಿದ್ದಾರೆ. ಎಂ.ಎಂ.ಕೀರವಾಣಿ ಸಂಗೀತ ನಿರ್ದೇಶನದ ಚಂದ್ರಬೋಸ್ ಸಾಹಿತ್ಯ ಬರೆದಿರುವ ‘ನಾಟು ನಾಟು’ ಹಾಡು ಇದಾಗಿದೆ. ಚಿತ್ರದಲ್ಲಿ ನಟ ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ ಆಕರ್ಷಕವಾಗಿ ಹೆಜ್ಜೆ ಹಾಕಿದ್ದಾರೆ. ವಿಭಿನ್ನ ಸಂಯೋಜನೆಯ ನೃತ್ಯ ನೋಡುಗರಲ್ಲಿ ರೋಮಾಂಚನ ಉಂಟುಮಾಡಿದೆ. ಹಲವು ನೆಟಿಜನ್ಸ್ ಅವರಂತೆಯೇ ನೃತ್ಯ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಈ ಮೂಲಕವೂ ಹಾಡು ಜಗತ್ತಿನಾದ್ಯಂತ ಹೆಚ್ಚು ಜನಪ್ರಿಯತೆ ಗಳಿಸಿತು.
ಈ ಸಾಧನೆಯ ಮುಖೇನ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಸಿನಿಮಾ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ‘ಬೆಸ್ಟ್ ಒರಿಜಿನಲ್ ಸಾಂಗ್’ ವಿಭಾಗದಲ್ಲಿ ‘ನಾಟು ನಾಟು’ ನಾಮಿನೇಟ್ ಆಗಿರುವುದಕ್ಕೆ ಇಡೀ ‘ಆರ್‌ಆರ್‌ಆರ್’ ತಂಡ ಪುಳಕಗೊಂಡಿದೆ. "ನಾವು ಇತಿಹಾಸ ಸೃಷ್ಟಿಸಿದ್ದೇವೆ. ನಾಟು ನಾಟು ಹಾಡು 95ನೇ ಅಕಾಡೆಮಿ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ಮೂಲ ಹಾಡುಗಳ ವಿಭಾಗಕ್ಕೆ ನಾಮನಿರ್ದೇಶನಗೊಂಡಿದೆ" ಎಂದು ಸಿನಿಮಾದ ಅಧಿಕೃತ ಟ್ವೀಟ್ ಪೇಜ್ ಚಿತ್ರ ತಂಡ ಟ್ವೀಟ್ ಮಾಡಿದೆ.