ವಿಶ್ವದ ಪ್ರತಿಷ್ಟಿತ ಪ್ರಶಸ್ತಿ ಪುರಸ್ಕಾರ ವಿಚಾರದಲ್ಲಿ ಭಾರತೀಯ ಚಿತ್ರೋದ್ಯಮ ಅಭೂತಪೂರ್ವ ಯಶಸ್ಸು ಕಂಡಿದೆ. ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾದ ಸೂಪರ್ ಹಿಟ್ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಹಾಗೆಯೇ, ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದಲ್ಲಿ ಮೂಡಿಬಂದ "ದ ಎಲಿಫೆಂಟ್ ವಿಸ್ಪರರ್ಸ್" ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡು ಭಾರತದ ಖ್ಯಾತಿ ಹೆಚ್ಚಿಸಿದೆ.
ಆರ್ಆರ್ಆರ್ ಟ್ರೆಂಡ್: ಸೋಮವಾರ ಲಾಸ್ ಏಂಜಲಿಸ್‌ನಲ್ಲಿ ನಡೆದ 95ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಆರ್ಆರ್ಆರ್ ತಾರೆಯರಾದ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅದ್ಭುತವಾಗಿ ಕಾಣಿಸಿಕೊಂಡಿದ್ದರು. ಈ ಬೇಡಿಕೆಯ ನಟರು ತೆಲುಗು ರಾಜ್ಯಗಳಲ್ಲದೇ ಪ್ರಪಂಚದಾದ್ಯಂತ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಚಿತ್ರದ, ಹಾಡಿನ ಕ್ರೇಜ್ ಕಿಂಚಿತ್ತೂ ಕಡಿಮೆ ಆಗಿಲ್ಲ. 2023ರ ಆಸ್ಕರ್ ನಂತರ ಸಾಮಾಜಿಕ ಮಾಧ್ಯಮದಲ್ಲಿ ಆರ್ಆರ್ಆರ್ ನಟರು ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ.
ಭಾರತೀಯ ನಟರ ಹೆಸರು ಟ್ರೆಂಡಿಂಗ್: ಆಸ್ಕರ್ 2023 ನಂತರ ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ ಜೂನಿಯರ್ ಎನ್‌ಟಿಆರ್, ರಾಮ್ಚರಣ್ ಹೆಸರು ಟ್ರೆಂಡಿಂಗ್ ಆಗುತ್ತಿದೆ. ಇವರು ಟ್ವಿಟರ್‌ನಲ್ಲಿ ಮಾತ್ರ ಅಗ್ರಸ್ಥಾನ ಪಡೆದುಕೊಂಡಿಲ್ಲ. ಕಳೆದ ಕೆಲವು ಸಮಯಗಳಿಂದ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಬಹಳಷ್ಟು ಸದ್ದು ಮಾಡಿದ್ದಾರೆ. ಇವರ ಸಾಮಾಜಿಕ ಮಾಧ್ಯಮದ ಉಪಸ್ಥಿತಿ ಕೂಡಾ ಅಗಾಧವಾಗಿ ಹೆಚ್ಚಾಗಿದ್ದು, ಆಸ್ಕರ್ ಸಮಾರಂಭ ಇದರ ತೂಕ ಹೆಚ್ಚಿಸಿದೆ.