ವಾಷಿಂಗ್ಟನ್ (ಯುಎಸ್):ಆಸ್ಕರ್ ಪ್ರಶಸ್ತಿ ವಿಜೇತ ಆರ್ಆರ್ಆರ್ ಸಿನಿಮಾದಲ್ಲಿ ಖಡಕ್ ಬ್ರಿಟಷ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದ ರೇ ಸ್ಟೀವನ್ಸನ್ ಅವರು 58 ನೇ ವಯಸ್ಸಿನಲ್ಲಿ ಇಟಲಿಯಲ್ಲಿ ಭಾನುವಾರ ನಿಧನರಾಗಿದ್ದಾರೆ. ಈ ಬಗ್ಗೆ ಅಲ್ಲಿನ ಮಾಧ್ಯಮಗಳು ಸುದ್ದಿ ಬಿತ್ತರ ಮಾಡಿವೆ. ಅಲ್ಲದೇ, ಆರ್ಆರ್ಆರ್ ಸಿನಿಮಾ ತಂಡ ಕೂಡ ತನ್ನ ಟ್ವಿಟರ್ ಖಾತೆಯಲ್ಲಿ ಸಂತಾಪ ಸೂಚಿಸಿದೆ.
ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿರುವ ನಿರ್ದೇಶಕ ಎಸ್.ಎಸ್.ರಾಜಮೌಳಿ ಆ್ಯಕ್ಷನ್ ಕಟ್ನಲ್ಲಿ ಮೂಡಿಬಂದ ಆರ್ಆರ್ಆರ್ ಸಿನಿಮಾದಲ್ಲಿ ಸ್ಟೀವನ್ಸನ್ ಬ್ರಿಟಿಷ್ ಅಧಿಕಾರಿ ಪಾತ್ರ ಪೋಷಣೆ ಮಾಡಿದ್ದರು. ಅವರ ಅಭಿನಯಕ್ಕಾಗಿ ಭಾರಿ ಮೆಚ್ಚುಗೆಯೂ ಒಲಿದು ಬಂದಿತ್ತು. ಸಿನಿಮಾದಲ್ಲಿ ಖಳ ನಾಯಕನ ಪಾತ್ರದ ಮೂಲಕ ಭಾರತೀಯ ಸಿನಿಮಾರಂಗಕ್ಕೆ ಅವರು ಪದಾರ್ಪಣೆ ಮಾಡಿದ್ದರು.
ಸ್ಟೀವನ್ಸನ್ರ ಸಿನಿಮಾ ಹಾದಿ..:ಉತ್ತಮ ನಟರಾಗಿದ್ದ ಸ್ಟೀವನ್ಸನ್ ಅವರು, ಮಾರ್ವೆಲ್‌ನ 'ಥಾರ್' ಸರಣಿಯಲ್ಲಿ ವೋಲ್ಟಾಗ್, 'ವೈಕಿಂಗ್ಸ್' ನಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು. ಅನಿಮೇಟೆಡ್ ಸ್ಟಾರ್ ವಾರ್ಸ್ ಸರಣಿಯಾದ 'ದಿ ಕ್ಲೋನ್ ವಾರ್ಸ್' ಮತ್ತು 'ರೆಬೆಲ್ಸ್'ನಲ್ಲಿ ಗಾರ್ ಸ್ಯಾಕ್ಸನ್‌ಗೆ ಧ್ವನಿ ಕೂಡ ನೀಡಿದ್ದರು. ಡಿಸ್ನಿ+ ನಲ್ಲಿ ಮುಂಬರುವ 'ದಿ ಮ್ಯಾಂಡಲೋರಿಯನ್ ಸ್ಪಿನ್‌ಆಫ್ ಅಶೋಕಾ'ದಲ್ಲಿ ರೊಸಾರಿಯೊ ಡಾಸನ್ ಪಾತ್ರದಲ್ಲಿ ಅವರು ನಟಿಸಿದ್ದಾರೆ.
ಸ್ಟೀವನ್ಸನ್ ಮೇ 25, 1964 ರಂದು ಉತ್ತರ ಐರ್ಲೆಂಡ್‌ನ ಲಿಸ್ಬರ್ನ್‌ನಲ್ಲಿ ಜನಿಸಿದರು. 1990 ರ ದಶಕದ ಯುರೋಪಿಯನ್ ಟಿವಿ ಸರಣಿಗಳು ಮತ್ತು ಟೆಲಿಫಿಲ್ಮ್‌ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ್ದರು. ಪಾಲ್ ಗ್ರೀನ್‌ಗ್ರಾಸ್‌ನ 1998 ರಲ್ಲಿ ಬಂದ ನಾಟಕವಾದ 'ದಿ ಥಿಯರಿ ಆಫ್ ಫ್ಲೈಟ್'ನಲ್ಲಿ ಹೆಲೆನಾ ಬೊನ್‌ಹ್ಯಾಮ್ ಕಾರ್ಟರ್ ಮತ್ತು ಕೆನ್ನೆತ್ ಬ್ರನಾಗ್ ಎದುರು ನಟಿಸುವ ಮೂಲಕ ಮೊದಲ ಬಾರಿಗೆ ದೊಡ್ಡ ಪರದೆಯನ್ನು ಹಂಚಿಕೊಂಡರು. ಆಂಟೊಯಿನ್ ಫುಕ್ವಾ ಅವರ 'ಕಿಂಗ್ ಆರ್ಥರ್' (2004), ಲೆಕ್ಸಿ ಅಲೆಕ್ಸಾಂಡರ್ ನಿರ್ದೇಶನದ 'ಪನಿಷರ್: ವಾರ್ ಝೋನ್' (2008), ಹ್ಯೂಸ್ ಬ್ರದರ್ಸ್ನ 'ದಿ ಬುಕ್ ಆಫ್ ಎಲಿ' (2010) ಮತ್ತು ಆ್ಯಡಂ ಮೆಕೇ ಅವರ 'ದಿ ಅದರ್ ಗಯ್ಸ್' (2010) ಸಿನಿಮಾಗಳಲ್ಲಿ ಪಾತ್ರ ಮಾಡಿದ್ದಾರೆ.
ಆರ್ಆರ್ಆರ್ ಟ್ವಿಟರ್ನಲ್ಲಿ ಸಂತಾಪ:ಆರ್ಆರ್ಆರ್ ತಂಡದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಿನಿಮಾ ತಂಡ ಸಂತಾಪ ವ್ಯಕ್ತಪಡಿಸಿದೆ. "ತಂಡದಲ್ಲಿರುವ ನಮಗೆಲ್ಲರಿಗೂ ಇದು ಆಘಾತಕಾರಿ ಸುದ್ದಿ. ರೆಸ್ಟ್ ಇನ್ ಪೀಸ್ ರೇ ಸ್ಟೀವನ್ಸನ್, ನೀವು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತೀರಿ. ಸರ್ ಸ್ಕಾಟ್" ಎಂದು ಬರೆಯಲಾಗಿದೆ.
ನೀರು ಮತ್ತು ಅಗ್ನಿಯನ್ನು ಕಥಾ ವಸ್ತುವನ್ನಾಗಿಟ್ಟುಕೊಂಡು ರೂಪಿಸಲಾದ ಆರ್ಆರ್ಆರ್ ಸಿನಿಮಾದಲ್ಲಿ ತೆಲುಗು ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ನಾಯಕರಾಗಿ ನಟಿಸಿದ್ದಾರೆ. ಸಿನಿಮಾದ ನಾಟು ನಾಟು ಹಾಡಿಗೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ದಕ್ಕಿದೆ.
ಇದನ್ನೂ ಓದಿ:ನಾಟು ನಾಟು ಹಾಡಿನ ಟ್ಯೂನ್ಗೆ ನೃತ್ಯ ಮಾಡಿದ ನಟ ರಾಮ್ ಚರಣ್ : ವಿಡಿಯೋ