ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 ರ ಕಿರೀಟ ನಟ, ಕರಾವಳಿ ಪ್ರತಿಭೆ ರೂಪೇಶ್ ಶೆಟ್ಟಿ ಮುಡಿಗೇರಿದೆ. ಒಟಿಟಿಯಲ್ಲಿ ಟಾಪರ್ ಆಗಿದ್ದ ರೂಪೇಶ್ ಶೆಟ್ಟಿ ಅವರೀಗ ಬಿಗ್ ಬಾಸ್ ಸೀಸನ್ 9 ರ ವಿನ್ನರ್ ಆಗಿದ್ದಾರೆ. ಇವರಿಗೆ ಪ್ರಬಲ ಪೈಪೋಟಿ ನೀಡಿದ್ದ ನಟ ರಾಕೇಶ್ ಅಡಿಗ ರನ್ನರ್ ಅಪ್ ಆಗಿ ಹೊರಹೊಮ್ಮಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭಾನ್ವಿತ ನಟ ಹಾಗೂ ಗಿರಿಗಿಟ್ ಚಿತ್ರದ ಮೂಲಕ ಹೆಸರು ಮಾಡಿರುವ ರೂಪೇಶ್ ಶೆಟ್ಟಿ ಮೊದಲು ಒಟಿಟಿ ಮೂಲಕ ಬಿಗ್ ಬಾಸ್ ಶೋ ಗೆ ಕಾಲಿಟ್ಟಿದ್ದರು. ಬಳಿಕ ಟಿವಿ ಬಿಗ್ ಬಾಸ್‌ನಲ್ಲಿಯೂ ಸ್ಪರ್ಧಿಯಾಗಿ ಸಖತ್ ಪೈಪೋಟಿ ನೀಡಿದ್ದರು.
ಈ ಬಾರಿ ಬಿಗ್ ಬಾಸ್ ಕನ್ನಡ ಗೆದ್ದಿರುವ ರೂಪೇಶ್ ಶೆಟ್ಟಿಗೆ 60 ಲಕ್ಷ ರೂಪಾಯಿ ಬಹುಮಾನ ದಕ್ಕಿದೆ. ಈ ಬಹುಮಾನದ ಮೊತ್ತಕ್ಕೆ ಶೇ.30 ತೆರಿಗೆ ಇದೆ. ಹೀಗಾಗಿ, 60 ಲಕ್ಷ ರೂಪಾಯಿಯಲ್ಲಿ 18 ಲಕ್ಷ ರೂ. ಕಡಿತವಾಗುತ್ತದೆ. ಅಂದರೆ ಬಿಗ್ ಬಾಸ್ ಗೆದ್ದ ಸ್ಪರ್ಧಿಗೆ 42 ಲಕ್ಷ ರೂಪಾಯಿ ಸಿಗಲಿದೆ.
ಫಿನಾಲೆ ಪ್ರವೇಶಿಸಿದ ಐವರು: ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 9 ರ ಫಿನಾಲೆಗೆ ಪ್ರವೇಶಿಸಿದ್ದರು. ಇವರಲ್ಲಿ ರಾಕೇಶ್ ಅಡಿಗ ಅವರು ಬಿಗ್ ಬಾಸ್ ಕನ್ನಡ ಒಟಿಟಿ ಶೋನಲ್ಲಿ ಫಿನಾಲೆಗೆ ಬಂದು, ಟಿವಿ ಸೀಸನ್‌ನಲ್ಲಿ ಕೂಡ ಉತ್ತಮವಾಗಿ ಆಟವಾಡಿ ಮನರಂಜನೆ ನೀಡಿದ್ದರು. ಹಾಗೆಯೇ ದೀಪಿಕಾ ದಾಸ್ ಅವರು ಎರಡು ಬಾರಿ ಬಿಗ್ ಬಾಸ್ ಫಿನಾಲೆಗೆ ತಲುಪಿದರೂ ಕೂಡ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ. ಈ ಸೀಸನ್‌ನಲ್ಲಿ ದೀಪಿಕಾ ದಾಸ್ ಅವರಿಗೆ ವೈಲ್ಡ್ ಕಾರ್ಡ್ ಎಂಟ್ರಿಯ ಅವಕಾಶ ಸಹ ಸಿಕ್ಕಿತ್ತು.
ಇದನ್ನೂ ಓದಿ:ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ ವಿರುದ್ಧ ಕಮೆಂಟ್.. ಮಂಗಳೂರಿನಲ್ಲಿ ಕುಟುಂಬಸ್ಥರಿಂದ ದೂರು