ಕೆಜಿಎಫ್ ಚಾಪ್ಟರ್ 2 ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದ ಮೇಲೆ ರಾಕಿಭಾಯ್ ಸೈಲೆಂಟ್ ಆಗಿದ್ರು. ರಾಕಿ ಎಲ್ಲೇ ಹೋದರು ಅವರ ಅಭಿಮಾನಿಗಳು ಮುಂದಿನ ಸಿನಿಮಾ ಯಾವಾಗ ಎನ್ನುವ ಪ್ರಶ್ನೆ ಕೇಳ್ತಾನೆ ಇದ್ರು. ಇದಕ್ಕೆ ನಗುತ್ತಲೆ ಸುಮ್ಮನಾಗ್ತಿದ್ದ ರಾಕಿಂಗ್ ಸ್ಟಾರ್ ಹೊಸ ವರ್ಷದ ಆರಂಭದಲ್ಲೇ ಹೈಪರ್ ಆಕ್ಟೀವ್ ಆಗಿದ್ದಾರೆ. ತಮ್ಮ ಹುಟ್ಟುಹಬ್ಬ ಆಚರಣೆಗಾಗಿ ಫ್ಯಾಮಿಲಿ ಹಾಗೂ ಸ್ನೇಹಿತರ ಜೊತೆ ದುಬೈಗೆ ಹಾರಿದ್ದ ರಾಕಿ. ಇದೀಗ ಸದ್ದಿಲ್ಲದೆ ಥಾಯ್ಲೆಂಡ್ಗೆ ಹೋಗಿ ಬಂದಿದ್ದಾರೆ. ಅಷ್ಟಕ್ಕೂ ರಾಕಿಭಾಯ್ ಥಾಯ್ಲೆಂಡ್ಗೆ ಹೋಗಿದ್ಯಾಕೆ? ಇಲ್ಲಿದೆ ನಿಮ್ಮ ಕುತೂಹಲಗಳಿಗೆ ಉತ್ತರ.
ರಾಮಾಚಾರಿ 37ನೇ ಹುಟ್ಟುಹಬ್ಬದ ಸಂಭ್ರಮವನ್ನು ಅಭಿಮಾನಿಗಳ ಜೊತೆ ಆಚರಿಸಿ, ಜನ್ಮದಿನದಂದೇ ತಮ್ಮ 19 ಚಿತ್ರದ ಅಪ್ಡೇಟ್ ಕೊಡ್ತಾರೆ ಅಂತ ರಾಕಿಭಾಯ್ ಅಭಿಮಾನಿಗಳು ರಾಕಿ ಉತ್ಸವ ಮಾಡಲು ಸಕಲ ಸಿದ್ದತೆ ಮಾಡಿಕೊಂಡಿದ್ದರು. ಆದರೆ, ಅಭಿಮಾನಿಗಳ ಆಸೆಯನ್ನು ನಿರಾಸೆ ಮಾಡಿದ್ದ ರಾಕಿ ತಮ್ಮ ಹುಟ್ಟುಹಬ್ಬವನ್ನು ಈ ವರ್ಷವೂ ಆಚರಿಸ್ತಿಲ್ಲ. ಜೊತೆಗೆ ವಿಭಿನ್ನವಾದ ಪ್ರಯತ್ನದ ಮೂಲಕ ನಿಮ್ಮ ಮುಂದೆ ಬರ್ತೀನಿ. ನನಗೆ ಸ್ವಲ್ಪ ಸಮಯ ಕೊಡಿ ಎಂದು ಅಭಿಮಾನಿ ದೇವರುಗಳಿಗೆ ಪ್ರೀತಿಯ ಪತ್ರ ಬರೆದು, ಬರ್ತ್ ಡೇ ಸೆಲಬ್ರೇಶನ್ಗಾಗಿ ಫ್ಯಾಮಿಲಿ ಮತ್ತು ಕಷ್ಟದಲ್ಲಿ ಜೊತೆಗಿದ್ದ ಸ್ನೇಹಿತರ ಜೊತೆ ದುಬೈಗೆ ಹಾರಿದ್ದರು.
ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜೊತೆ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದ ರಾಕಿ, ಒಂದೆರಡು ದಿನ ದುಬೈನಲ್ಲಿ ಕಾಲ ಕಳೆದು ಪತ್ನಿ ಮತ್ತು ಮಕ್ಕಳನ್ನು ದುಬೈನಿಂದ ಇಂಡಿಯಾಗೆ ಕಳಿಸಿ ನೇರವಾಗಿ ಚಾರ್ಟೆಡ್ ಫ್ಲೈಟ್ನಲ್ಲಿ ರಾಕಿಭಾಯ್ ಥಾಯ್ಲೆಂಡ್ಗೆ ಹಾರಿದ್ದಾರೆ. ಇನ್ನು ರಾಕಿ ಥಾಯ್ಲೆಂಡ್ ಕಡೆ ಹಾರಿದ್ದು, ಗುಟ್ಟಾಗಿಯೇ ಇತ್ತು. ಆದರೆ ಆ ಗುಟ್ಟು ಯಶ್ ಮತ್ತೆ ಭಾರತಕ್ಕೆ ವಾಪಸ್ ಬಂದ್ಮೇಲೆ ರಟ್ಟಾಗಿದೆ. ಯಾವಾಗ ರಾಕಿ ಏಕಾಂಗಿಯಾಗಿ ಚಾರ್ಟೆಡ್ ಪ್ಲೈಟ್ನಲ್ಲಿ ವಾಪಸ್ ಕರ್ನಾಟಕಕ್ಕೆ ಬಂದ್ರೊ ಆಗಿನಿಂದ ಅವರ ಅಭಿಮಾನಿ ಮಂದಿಗೆ ಒಂದು ಹೊಸ ಕುತೂಹಲ ಶುರುವಾಗಿದೆ. ಹುಟ್ಟು ಹಬ್ಬಕ್ಕೆ ದುಬೈಗೆ ಹಾರಿದ್ದ ರಾಕಿ ಥಾಯ್ಲೆಂಡ್ಗೆ ಏಕೆ ಹೋಗಿರಬಹುದು ಎಂದು ತಲೆ ಕೆಡಿಸಿಕೊಂಡು ರಾಕಿ ನಡೆಯನ್ನು ಗಮನಿಸ್ತಿದ್ದಾರೆ.
ಅಭಿಮಾನಿಗಳ ಬಯಕೆ ಈಡೇರಿಸಲು ಕಣ್ಮರೆಯಾಗುತ್ತಿದ್ದಾರೆ ಮಾಸ್ಟರ್ಪೀಸ್: ಇನ್ನು ಹೊಸ ವರ್ಷದ ಆರಂಭದಲ್ಲೇ ರಾಕಿ ನಡೆ ನಿಗೂಢವಾಗಿದೆ. ಏಕೆಂದರೆ ಕೆಜಿಎಫ್ ಬಂದು ಈಗಾಗಲೇ 8 ತಿಂಗಳು ಕಳೆದೋಗಿದ್ದರೂ ಇನ್ನೂ ಯಶ್ ತಮ್ಮ 19ನೇ ಚಿತ್ರದ ಚಿಕ್ಕ ಸುಳಿವನ್ನೂ ಬಿಟ್ಟು ಕೊಟ್ಟಿಲ್ಲ. ಯಶ್ ಮುಂದಿನ ಚಿತ್ರವನ್ನು ನರ್ತನ್, ಶಂಕರ್, ಪುರಿ ಜಗನ್ನಾಥ್ ಡೈರೆಕ್ಷನ್ ಮಾಡ್ತಾರೆ. ಎನ್ನುವ ಮಾತುಗಳು ಒಂದಾದ ಮೇಲೆ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು. ಅವುಗಳು ವೈರಲ್ಗಷ್ಟೆ ಸೀಮಿತವಾಯ್ತು ವಿನಃ ಯಶ್ ಇದುವರೆಗೂ ತಮ್ಮ ಮುಂದಿನ ಚಿತ್ರ ಯಾವುದು? ಆ ಚಿತ್ರಕ್ಕೆ ನಿರ್ಮಾಪಕ ಯಾರು..? ನಿರ್ದೇಶಕ ಯಾರು ಅನ್ನೋದರ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಅಲ್ಲದೇ ನನ್ನ ಮುಂದಿನ ಚಿತ್ರ ಯಾವ ರೀತಿ ಇರಬೇಕು ಅಂತ ನನ್ನ ಅಭಿಮಾನಿಗಳೇ ಡಿಸೈಡ್ ಮಾಡ್ತಾರೆ. ಅಷ್ಟೆ ಯಾಕೆ ನಾನು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ ಮಾಡಬೇಕು ಅನ್ನೋದು ನನ್ನ ಪ್ರೀತಿಸೋ ಹೃದಯಗಳ ಬಯಕೆ. ಅದನ್ನು ಈಡೇರಿಸಲು ಮಾಸ್ಟರ್ ಪೀಸ್ ರೆಡಿಯಾಗುತ್ತಿದ್ದಾರೆ.