ಬಾಲಿವುಡ್ ನಟರಾದ ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟನೆಯ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಮಾಡ್ರನ್ ಫ್ಯಾಮಿಲಿ ಲವ್ ಸ್ಟೋರಿ ಥಿಯೇಟರ್ಗಳಲ್ಲಿ ಧೂಳೆಬ್ಬಿಸುತ್ತಿದೆ. ಸಿನಿ ಪ್ರೇಮಿಗಳನ್ನು ಆಕರ್ಷಿಸುವಲ್ಲಿ ಕರಣ್ ಜೋಹರ್ ಚಿತ್ರ ಯಶಸ್ವಿಯಾಗಿದೆ. ಕಲೆಕ್ಷನ್ ವಿಚಾರದಲ್ಲೂ ವೇಗದ ಓಟ ಮುಂದುವರೆಸಿದೆ. ಈ ಚಿತ್ರ ಜುಲೈ 28 ರಂದು (ಶುಕ್ರವಾರ) ತೆರೆಗೆ ಅಪ್ಪಳಿಸಿತ್ತು.
ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಚಿತ್ರವು ಆರನೇ ದಿನ 6.90 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಬಿಡುಗಡೆಯಾದ ಆರು ದಿನಗಳಲ್ಲಿ ಒಟ್ಟು 67.12 ಕೋಟಿ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ. ಮೊದಲ ದಿನ 11.1 ಕೋಟಿ ರೂ., ಎರಡನೇ ದಿನ 16.5 ಕೋಟಿ ರೂ., ಮೂರನೇ ದಿನ 19 ಕೋಟಿ ರೂ, ನಾಲ್ಕನೇ ದಿನ 7.50 ಕೋಟಿ ರೂ. ಮತ್ತು ಐದನೇ ದಿನ 7.25 ಕೋಟಿ ರೂ. ಗಳಿಸಿತ್ತು. ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರ ಮಂಗಳವಾರ 100 ಕೋಟಿ ಗಳಿಸಿದೆ.
'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾಗೆ ಕಾಂಪಿಟೇಶನ್ ಕೊಡಲು ಯಾವುದೇ ಹಿಂದಿ ಸಿನಿಮಾಗಳು ಸದ್ಯ ಬಿಡುಗಡೆ ಕಂಡಿಲ್ಲ. ಆದರೆ ಹಾಲಿವುಡ್ ಸಿನಿಮಾಗಳಾದ ಓಪನ್ಹೈಮರ್ ಮತ್ತು ಬಾರ್ಬಿಯೊಂದಿಗೆ ಜನರನ್ನು ಸೆಳೆಯಲು ಕರಣ್ ಜೋಹರ್ ಚಿತ್ರ ಹೆಚ್ಚು ಪ್ರಯತ್ನಿಸುತ್ತಿದೆ. ವರದಿಗಳ ಪ್ರಕಾರ, 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ 178 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧಗೊಂಡಿದೆ. 2300 ಪರದೆಗಳಲ್ಲಿ (2000 ಭಾರತ ಮತ್ತು 300 ವಿದೇಶ) ಶುಕ್ರವಾರ ಬಿಡುಗಡೆಯಾಗಿತ್ತು.