#Yash19... ಇದು ಸಾಮಾಜಿಕ ಜಾಲತಾಣದಲ್ಲಿ ಬಹು ಸಮಯದಿಂದ ಟ್ರೆಂಡ್ನಲ್ಲಿರುವ ನಟ ಯಶ್ ಹೆಸರಿನ ಕೀವರ್ಡ್. ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಖ್ಯಾತಿಯ ಯಶ್ ಅವರ ಮುಂದಿನ ಸಿನಿಮಾ ಎಂಬ ಬಗ್ಗೆ ಅಂತೆಕಂತೆಗಳು ಸಾಕಷ್ಟು ಉರುಳಿ ಹೋಗಿವೆ. ಬೇಗ ಅಪ್ಡೇಟ್ಸ್ ಕೊಡುವಂತೆ ಅಭಿಮಾನಿಗಳು ಬೇಡಿಕೆ ಇಡುತ್ತಲೇ ಇದ್ದಾರೆ. ಆದ್ರೆ ಯಶ್19 ಬಗ್ಗೆ ಯಾವುದೇ ಸುಳಿವಿಲ್ಲ. ಕೆಜಿಎಫ್ ಭಾಗ 2 ತೆರೆ ಕಂಡು ಒಂದು ವರ್ಷ ಕಳೆದರೂ ಯಶ್ ನಡೆ ಮಾತ್ರ ನಿಗೂಢ. ಹಾಗಾದ್ರೆ ಮುಂದಿನ ಸಿನಿಮಾ ಹೇಗಿರಬಹುದು ಎಂಬುದು ಹಲವರ ಕುತೂಹಲ. ಕೆಲವರಂತೂ ಯಶ್ ನಡೆಗೆ ಅಸಮಾಧಾನ ಕೂಡಾ ವ್ಯಕ್ತಪಡಿಸಿದ್ದಾರೆ.
ಯಶ್ ಕನ್ನಡ ಚಿತ್ರರಂಗದಿಂದ ಬಾಲಿವುಡ್ಗೆ ಹಾರಲಿದ್ದಾರೆ ಎಂಬ ವದಂತಿಯೂ ಇತ್ತೀಚೆಗೆ ಕೇಳಿಬಂದಿತ್ತು. ಆದ್ರೆ ಯಶ್ ನಟಿಸುತ್ತಿಲ್ಲ ಎಂಬ ಮಾಹಿತಿ ಸಿಕ್ಕ ನಂತರ ಕನ್ನಡಾಭಿಮಾನಿಗಳು ನಿಟ್ಟುಸಿರುಬಿಟ್ಟರು. ಯಶ್ 19 ಕುರಿತು ಈವರೆಗೆ ಹಲವು ಊಹಾಪೋಹಗಳು ಬಂದು ಹೋಗಿದ್ದರೂ ಯಶ್ ಅವರದ್ದು ಮಾತ್ರ ದಿವ್ಯಮೌನ. ತಮ್ಮ ಮುಂದಿನ ಸಿನಿಮಾ ಕುರಿತು ಅವರು ಬಾಯ್ಬಿಡುತ್ತಿಲ್ಲ. ಆದ್ರಿಂದು ಮೈಸೂರಿನಲ್ಲಿ ಯಶ್ ಉತ್ತರಿಸಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗಿದ್ದರಿಂದ ಅವರು ಸಣ್ಣದೊಂದು ಸುಳಿವು ಬಿಟ್ಟುಕೊಟ್ಟರು.
ಯಶ್ ಇಂದು ಕುಟುಂಬಸಮೇತ ಪ್ರಸಿದ್ಧ ನಂಜುಡೇಶ್ವರನ ಸನ್ನಿಧಿಗೆ ಭೇಟಿ ಕೊಟ್ಟ ವೇಳೆ ಮುಂದಿನ ಸಿನಿಮಾ ಕುರಿತ ಪ್ರಶ್ನೆಗಳು ಎದುರಾದವು. ಸಮಾಧಾನದ ಸಂಗತಿಯೆಂದರೆ ಇಂದು ಯಶ್, "ಕಾದು ನೋಡಿ" ಎಂಬ ರೆಗ್ಯೂಲರ್ ಉತ್ತರಕ್ಕೆ ಸೀಮಿತವಾಗಿರದೇ ಕೆಲವು ಮಾಹಿತಿಯನ್ನೂ ಹಂಚಿಕೊಂಡರು. "ನಾನು ಎಲ್ಲಿಯೂ ಹೋಗಲ್ಲ (ಬಾಲಿವುಡ್), ಎಲ್ಲರನ್ನೂ ನಾನು ಇರುವ ಕಡೆಗೆ ಕರೆಸಿಕೊಳ್ಳುತ್ತೇನೆ" ಎಂದುಬಿಟ್ಟರು.
ನಂಜುಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಯಶ್, "ದೇವರ ಸನ್ನಿಧಿಯಲ್ಲಿ ಇದ್ದೇನೆ. ಸುಖಾ ಸುಮ್ಮನೆ ಹೇಳಿಕೆ ಕೊಡುವುದಿಲ್ಲ. ಒಂದಂತೂ ನಿಜ. ಜನರು ನಮಗೆ ಶಕ್ತಿ ಕೊಟ್ಟು ಬೆಳೆಸಿದ್ದಾರೆ, ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ನಾನು ನಂಬೋದು ಒಂದೇ, ಎಲ್ಲರೂ ದುಡ್ಡು ಕೊಟ್ಟು ಸಿನಿಮಾ ನೋಡ್ತಾರೆ. ಆ ದುಡ್ಡಿಗೊಂದು ವ್ಯಾಲ್ಯೂ ಇರಬೇಕು. ನಾವು ಮಾಡೋ ಕೆಲಸದಲ್ಲಿ ಶ್ರದ್ಧೆ ಇರಬೇಕು. ಇಡೀ ದೇಶ ಅಥವಾ ಇಡೀ ಜಗತ್ತು ನೋಡುತ್ತಿದೆ. ಆ ಜವಾಬ್ದಾರಿ ನನ್ನ ಮೇಲಿದೆ" ಎಂದು ತಿಳಿಸಿದರು.