ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದ ಮಾದರಿ ದಂಪತಿ. ಈ ಜೋಡಿ ಅದ್ಭುತ ಸಿನಿಮಾಗಳನ್ನು ನೀಡಿದ್ದಲ್ಲದೇ, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫ್ಯಾನ್ಸ್ ಕೂಡ ಈ ಜೋಡಿ ಬಗ್ಗೆ ತಿಳಿದುಕೊಳ್ಳಲು ಸದಾ ಕುತೂಹಲರಾಗಿರುತ್ತಾರೆ.
ಗ್ರ್ಯಾಂಡ್ ಬರ್ತ್ಡೇ ಸೆಲೆಬ್ರೇಶನ್:ಸ್ಯಾಂಡಲ್ವುಡ್ನಲ್ಲಿ ರಾಕಿಂಗ್ ಜೋಡಿಯಾಗಿ ಗುರುತಿಸಿಕೊಂಡಿರುವ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮುದ್ದಿನ ಮಕ್ಕಳಾದ ಐರಾ, ಯಥರ್ವ್ ಮಾಡುವ ತರ್ಲೆ ತುಂಟಾಟಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಪೋಷಕರಂತೆ ಮಕ್ಕಳಿಗೂ ಕೂಡ ಅಭಿಮಾನಿಗಳಿದ್ದಾರೆ. ಇವರ ವಿಡಿಯೋ ನೋಡಲು ನೆಟ್ಟಿಗರು ಉತ್ಸುಕರಾಗಿರುತ್ತಾರೆ. ಇದೀಗ ಮಗ ಯಥರ್ವ್ ಹುಟ್ಟುಹಬ್ಬವನ್ನು ರಾಕಿಂಗ್ ಕಪಲ್ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡಿದ್ದಾರೆ.
ಆಪ್ತರೊಂದಿಗೆ ಯಥರ್ವ್ ಜನ್ಮದಿನಾಚರಣೆ: ಅಕ್ಟೋಬರ್ 30ಕ್ಕೆ ಯಥರ್ವ್ಗೆ ನಾಲ್ಕು ವರ್ಷ ತುಂಬಿದೆ. ಬಳಿಕ ಮಗನ ಬರ್ತ್ ಡೇಯನ್ನು ಸಾಕಷ್ಟು ಸಂಖ್ಯೆಯ ಮಕ್ಕಳೊಂದಿಗೆ ಅದ್ಧೂರಿಯಾಗಿ ಆಚರಿಸಿದ್ದಾರೆ. ಮಕ್ಕಳಿಗೆ ಇಷ್ಟ ಆಗುವ ಗೇಮ್ಸ್ ಆಯೋಜಿಸುವ ಮೂಲಕ ಯಥರ್ವ್ನ ನಾಲ್ಕನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಬರ್ತ್ಡೇ ಸೆಲೆಬ್ರೇಶನ್ಗೆ ಸಂಬಂಧಿಕರು, ಸ್ನೇಹಿತರು ಸಾಕ್ಷಿಯಾಗಿದ್ದರು. ಆದ್ರೆ ಯಶ್ ಮಗನ ಹುಟ್ಟುಹಬ್ಬಾಚರಣೆಯಲ್ಲಿ ಚಿತ್ರರಂಗದವರು ಕಾಣಿಸಿಕೊಂಡಿಲ್ಲ. ಇದು ಕೇವಲ ಸಂಬಂಧಿಕರು, ಆಪ್ತರಿಗಾಗಿ ಆಯೋಜಿಸಿದ್ದ ಪಾರ್ಟಿ ಎಂಬುದು ಜೋಡಿ ಅನಾವರಣಗೊಳಿಸಿರುವ ವಿಡಿಯೋದಲ್ಲಿ ಗೊತ್ತಾಗುತ್ತದೆ.