ಕೆಜಿಎಫ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಬಹುದೊಡ್ಡ ಯಶಸ್ಸಿನ ಮೂಲಕ ರಾಕಿಂಗ್ ಸ್ಟಾರ್ ಯಶ್ ಈಗ ನ್ಯಾಷನಲ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಕೆಜಿಎಫ್ 2 ಚಿತ್ರ ತೆರೆಕಂಡು ತಿಂಗಳುಗಳೇ ಕಳೆದರೂ ಯಶ್ 19ನೇ ಸಿನಿಮಾ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ. ಆದರೂ ಯಶ್ ಮೇಲಿನ ಬೇಡಿಕೆ, ಆ ಕ್ರೇಜ್ ಇನ್ನೂ ಕಮ್ಮಿಯಾಗಿಲ್ಲ. ಸಿನಿಮಾ ಇಲ್ಲದೇ ಇದ್ರೂ ಹೊಸ ಲುಕ್ನಲ್ಲಿ ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದಾರೆ ರಾಕಿಂಗ್ ಸ್ಟಾರ್ ಯಶ್.
ಪೆಪ್ಸಿ ಕೂಲ್ ಡ್ರಿಂಕ್ಸ್ ಜಾಹೀರಾತು: ಕೆಜಿಎಫ್ 2 ಬಳಿಕ ನಟ ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಕೇವಲ ಅಭಿಮಾನಿಗಳಲ್ಲಿ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲಿದೆ. ಸಿನಿಮಾ ಘೋಷಣೆ ಮಾಡುತ್ತಾರೆ ಎಂಬ ಕುತೂಹಲದಲ್ಲಿ ಕಾಯುತ್ತಿದ್ದ ಅಭಿಮಾನಿಗಳಿಗೆ ಯಶ್ ಹೊಸ ಲುಕ್ನಲ್ಲಿ ಪ್ರದರ್ಶನ ಕೊಟ್ಟಿದ್ದಾರೆ. ಕೋಟಿ ಕೋಟಿ ಸಂಭಾವನೆ ಸಿಗುವ ಇಂಟರ್ನ್ಯಾಷನಲ್ ಜಾಹೀರಾತಿನಲ್ಲಿ ನಟ ಯಶ್ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅಡುಗೆ ಎಣ್ಣೆ ಜಾಹೀರಾತಿನಲ್ಲಿ ಪತ್ನಿ ರಾಧಿಕಾ ಪಂಡಿತ್ ಜೊತೆ ರೊಮ್ಯಾನ್ಸ್ ಮಾಡಿದ್ದ ಯಶ್ ಇದೀಗ ವಿಶ್ವದ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರೋ ಪೆಪ್ಸಿ ಕೂಲ್ ಡ್ರಿಂಕ್ಸ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕಾಣಿಸಿಕೊಂಡಿದ್ದಾರೆ.
ಇಂಟರ್ನ್ಯಾಷನಲ್ ಜಾಹೀರಾತಿನಲ್ಲಿ ಕನ್ನಡದ ತಾರೆ:ರಾಕಿಂಗ್ ಸ್ಟಾರ್ ಈಗ ಕೇವಲ ಸ್ಯಾಂಡಲ್ವುಡ್ ಸ್ಟಾರ್ ಅಲ್ಲ. ಇಡೀ ಭಾರತೀಯ ಚಿತ್ರರಂಗದ ಸ್ಟಾರ್ ನಟನಾಗಿ ಹೊರ ಹೊಮ್ಮಿದ್ದಾರೆ. ಕೆಜಿಎಫ್ ಚಾಪ್ಟರ್ 1 ಬಂದಾಗಲೇ ಯಶ್ ಕ್ರೇಜ್ ದೇಶ್ಯಾದ್ಯಂತ ಸೃಷ್ಟಿಯಾಗಿತ್ತು. ಕೆಜಿಎಫ್ ಚಾಪ್ಟರ್ 2 ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಬಾಲಿವುಡ್ ಸ್ಟಾರ್ ನಟರು ಸೇರಿದಂತೆ ಇಡೀ ಭಾರತೀಯ ಚಿತ್ರರಂಗವು ಕನ್ನಡದ ಕೆಜಿಎಫ್ ಹಾಗೂ ಯಶ್ ಬಗ್ಗೆ ಮಾತನಾಡುವ ಮಟ್ಟಿಗೆ ಕ್ರೇಜ್ ಹುಟ್ಟಿಸಿತ್ತು. ಈವರೆಗೆ ಬಾಲಿವುಡ್ ಹಾಗೂ ಕ್ರಿಕೆಟ್ ಲೋಕದ ತಾರೆಯರು ಮಾತ್ರ ಪೆಪ್ಸಿ ತಂಪು ಪಾನೀಯಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಇದೇ ಮೊದಲ ಬಾರಿಗೆ ಕನ್ನಡದ ನಟನೊಬ್ಬ ಇಂಟರ್ನ್ಯಾಷನಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿರೋದು ಹೆಮ್ಮೆಯ ವಿಚಾರ.
ಯಶ್ ಪಡೆದ ಸಂಭಾವನೆ:ನ್ಯಾಷನಲ್ ಸ್ಟಾರ್ ಯಶ್ ಕ್ರೇಜ್ ಹೇಗಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಪೆಪ್ಸಿ ತಂಪು ಪಾನೀಯ ಸಂಸ್ಥೆ ಈಗ ಕನ್ನಡದ ನಟನನ್ನು ಅಂಬಾಸಿಡರ್ ಆಗಿ ಆಯ್ಕೆ ಮಾಡಿಕೊಂಡು ಅಗ್ರಿಮೆಂಟ್ ಮಾಡಿಕೊಂಡಿದೆ ಅಂದ್ರೆ ಭಾರೀ ಮೊತ್ತದ ಸಂಭಾವನೆಯನ್ನು ಯಶ್ ಅವರಿಗೆ ಕೊಟ್ಟಿರೋದು ಗೊತ್ತಾಗುತ್ತೆ. ಯಶ್ ಹೆಚ್ಚಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇಂಥಹ ಯಾವುದೇ ಅವಕಾಶ ಬಂದರೂ ಅಳೆದು ತೂಗಿ ಆರಿಸಿಕೊಳ್ಳುತ್ತಾರೆ.