ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಒಂದೊಳ್ಳೆ ಕಂಟೆಂಟ್ ಜೊತೆಗೆ ತೆರೆ ಮೇಲೆ ಕಥೆ ರವಾನಿಸುವ ರೀತಿಗೆ ಸಿನಿಪ್ರಿಯರು ಮನಸೋತಿದ್ದಾರೆ. ಆದರೆ 2023ರಲ್ಲಿ ಸೂಪರ್ ಡೂಪರ್ ಹಿಟ್ ಎನ್ನುವ ಸಿನಿಮಾಗಳು ನಿರ್ಮಾಣವಾಗಿಲ್ಲ. 2022ರಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಮತ್ತು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟನೆಯ ಕಾಂತಾರ ಇಡೀ ಭಾರತೀಯ ಚಿತ್ರರಂಗವನ್ನೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿತ್ತು. ಈ ಹಿನ್ನೆಲೆ ಸ್ಯಾಂಡಲ್ವುಡ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ.
ಸ್ಕೈಪ್ ಮೂಲಕ ಸಿನಿಮಾ ನಿರ್ದೇಶನ: ಒಳ್ಳೆ ಕಂಟೆಂಟ್ ಇರುವ ಚಿತ್ರಗಳು ಸಿನಿ ಪ್ರಿಯರನ್ನು ಆಕರ್ಷಿಸುತ್ತವೆ ಅನ್ನುವುದರಲ್ಲಿ ಡೌಟೇ ಇಲ್ಲ. ಇದೀಗ ಸ್ಕೈಪ್ ಮೂಲಕ ನಿರ್ದೇಶನ ಮಾಡಿರೋ 'ರೋಡ್ ಕಿಂಗ್' ಎಂಬ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. ಕೋವಿಡ್ ನಂತರ ಇಂಟರ್ನೆಟ್ ಬಳಕೆ ಬಹಳ ಹೆಚ್ಚಾಗಿದೆ. ಪ್ರಸ್ತುತ ಹೆಚ್ಚಾಗಿ ಎಲ್ಲ ಕೆಲಸಗಳು ಆನಲೈನ್ನಲ್ಲೇ ನಡೆಯುತ್ತಿದೆ. ಆದರೆ, ಕೋವಿಡ್ ಪೂರ್ವದಲೇ ಹಾಲಿವುಡ್ ನಿರ್ದೇಶಕ ರಾಂಡಿ ಕೆಂಟ್ "ರೋಡ್ ಕಿಂಗ್" ಚಿತ್ರವನ್ನು ಸ್ಕೈಪ್ ಮೂಲಕ ನಿರ್ದೇಶಿಸಿದ್ದಾರೆ. ಈ ರೀತಿ ಸ್ಕೈಪ್ ಮೂಲಕ ನಿರ್ದೇಶನ ಮಾಡಿರುವುದು ಕನ್ನಡದಲ್ಲಿ ಇದೇ ಮೊದಲು.
ನಟ ಮತೀನ್ ಹುಸೇನ್ ಮಾತನಾಡಿ, ಹಾಲಿವುಡ್ ಚಿತ್ರರಂಗದ ರಾಂಡಿ ಕೆಂಟ್ ಅವರ ಬಳಿ ಈ ಚಿತ್ರವನ್ನು ನಿರ್ದೇಶನ ಮಾಡಿಸಬೇಕೆಂದುಕೊಂಡು ಎಲ್ಲ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ, ಕೊನೆ ಗಳಿಗೆಯಲ್ಲಿ ವೀಸಾ ಸಮಸ್ಯೆಯಿಂದ ರಾಂಡಿ ಅವರು ಭಾರತಕ್ಕೆ ಬರಲಾಗಲಿಲ್ಲ. ಆಗ ಏನು ಮಾಡಬೇಕೆಂದು ಹೊಳೆಯಲಿಲ್ಲ. ಹೀಗೆ ಯೋಚಿಸುತ್ತಿದ್ದಾಗ ಸ್ಕೈಪ್ ಮೂಲಕ ನಿರ್ದೇಶನ ಮಾಡಿಸಿದರೆ ಹೇಗೆ? ಎಂದು ನನ್ನ ಮಿತ್ರ ಭುವನ್ ಬಳಿ ಹೇಳಿದೆ. ಬಳಿಕ ಸ್ಕೈಪ್ ಮೂಲಕವೇ ರಾಂಡಿ ಅವರು ಅಮೆರಿಕದಿಂದ ಈ ಚಿತ್ರ ನಿರ್ದೇಶನ ಮಾಡಿದರು. ಹಲವು ಕಾರಣಾಂತರದಿಂದ ಚಿತ್ರ ತೆರೆಗೆ ಬರುವುದು ತಡವಾಯಿತು. ಈ ಸಿನಿಮಾಗೆ ನಾನೇ ಕಥೆ ಬರೆದ್ದು, ಹೀರೋ ಆಗಿ ಅಭಿನಯಿಸಿದ್ದೇನೆ ಎಂದು ತಿಳಿಸಿದರು.
ನಿರ್ದೇಶಕ ರಾಂಡಿ ಕೆಂಟ್ ಮಾತನಾಡಿ, ನಾನು ಹಾಲಿವುಡ್ನಲ್ಲಿ 13 ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಸ್ಕೈಪ್ ಮೂಲಕ ಕನ್ನಡ ಚಿತ್ರವೊಂದನ್ನು ನಿರ್ದೇಶಿಸಿದ್ದು ನನಗೆ ಖಷಿ ಕೊಟ್ಟಿದೆ ಎಂದು ತಿಳಿಸಿದರು.