ಆಪರೇಷನ್ ಅಲಮೇಲಮ್ಮ, ಕವಲುದಾರಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ರಿಷಿ. ಕಾಮಿಡಿ, ಸಸ್ಪೆನ್ಸ್ ಹಾಗೂ ಪ್ರೇಮಕಥೆ ಯಾವುದೇ ಇರಲಿ ಅದಕ್ಕೆ ರಿಷಿ ಸರಿಹೊಂದುತ್ತಾರೆ. ಸಿನಿಮಾ ಮಾತ್ರವಲ್ಲ ವೆಬ್ ಸೀರಿಸ್ ಮೂಲಕವೂ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಂಡಿದ್ದಾರೆ.
ಲವರ್ ಬಾಯ್ ಆಗಿ ರಿಷಿ:ತೆಲುಗಿನ ಜನಪ್ರಿಯ ನಿರ್ದೇಶಕ ಮಹಿ ರಾಘವ್ ಆ್ಯಕ್ಷನ್ ಕಟ್ ಹೇಳಿರುವ ಕ್ರೈಂ ಡ್ರಾಮಾ 'ಶೈತಾನ್'ನಲ್ಲಿ ರಿಷಿ ರಗಡ್ ಅವತಾರದಲ್ಲಿ ಅಮೋಘವಾಗಿ ಅಭಿನಯಿಸಿ ಮೆಚ್ಚುಗೆ ಸಂಪಾದಿಸಿದ್ದಾರೆ. ಇದೀಗ 'ರಾಮನ ಅವತಾರ' ಸಿನಿಮಾದಲ್ಲಿ ಬ್ಯುಸಿಯಾಗಿರುವ ರಿಷಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ.
'ರಾಮನ ಅವತಾರ'.... ರಿಷಿ ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾ 'ರಾಮನ ಅವತಾರ'. ಇತ್ತೀಚೆಗೆಷ್ಟೇ ರಾಮ ಈಸ್ ಜೆಂಟಲ್ ಮ್ಯಾನ್ ಹಾಡು ಅನಾವರಣಗೊಂಡಿತ್ತು. ಅದಾದ ಬಳಿಕ ಚಿತ್ರದ ಎರಡನೇ ಹಾಡು ಬಿಡುಗಡೆ ಆಗಿದೆ. 'ಮನಸ್ಸು ಬೇರೆಯ ದಿಕ್ಕಲಿ ಸಾಗಲು' ಎನ್ನುವ ಹಾಡು ಇತ್ತೀಚೆಗೆ ಅನಾವರಣಗೊಂಡು ಉತ್ತಮ ವೀಕ್ಷಣೆ ಪಡೆದಿದೆ. ಸಿಂಪಲ್ ಸುನಿ ಅವರ ಸಾಹಿತ್ಯವಿರುವ ಮನಸ್ಸು ಬೇರೆಯ ದಿಕ್ಕಲಿ ಸಾಗಲು ಹಾಡಿಗೆ ಸಂಚಿತ್ ಹೆಗ್ಡೆ ದನಿಯಾಗಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದಾರೆ. ಉಡುಪಿ ಬೀಚ್ನಲ್ಲಿ ಇಡೀ ಹಾಡನ್ನು ಚಿತ್ರೀಕರಿಸಲಾಗಿದೆ. ಸೊಗಸಾದ ಪ್ರೇಮಗೀತೆಯಲ್ಲಿ ರಿಷಿ ಹಾಗೂ ಪ್ರಣಿತಾ ಸುಭಾಷ್ ಜೋಡಿ ನೋಡುಗರ ಗಮನ ಸೆಳೆಯುತ್ತಿದೆ.
ರಾಮನ ಅವತಾರ ಸಿನಿಮಾದಲ್ಲಿ ಪ್ರಣಿತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸುತ್ತಿದ್ದಾರೆ. ಅರುಣ್ ಸಾಗರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತಮ್ಮದೇ ನಾಟಿ ಫ್ಯಾಕ್ಟರಿ ಯೂಟ್ಯೂಬ್ ಚಾನೆಲ್ ಮೂಲಕ ಜನಪ್ರಿಯತೆ ಪಡೆದಿರುವ ವಿಕಾಸ್ ಪಂಪಾಪತಿ ರಾಮನ ಅವತಾರ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಚಿತ್ರ. ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ವಿಕಾಸ್ ನಿರ್ದೇಶಕರಾಗಿ ಹೊರಹೊಮ್ಮಲಿದ್ದಾರೆ.