ಕಾಂತಾರ ಮೂಲಕ ದೇಶಾದ್ಯಂತ ಗಮನ ಸೆಳೆದಿರುವ ನಟ ರಿಷಬ್ ಶೆಟ್ಟಿ ಅವರು ಸಿನಿಮಾ ಜೊತೆ ಜೊತೆಗೆ ತಮ್ಮ ಕುಟುಂಬಕ್ಕೂ ಹೆಚ್ಚಿನ ಸಮಯ ಕೊಡುತ್ತಾರೆ. ಕುಟುಂಬದೊಂದಿಗೆ ಕಳೆದ ಕ್ಷಣಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ ಈ ಫ್ಯಾಮಿಲಿ ಮ್ಯಾನ್. ಕಳೆದ ವಾರ ಪುತ್ರ ರಣ್ವಿತ್ ಶೆಟ್ಟಿಯ ಜನ್ಮದಿನ ಆಚರಿಸಿದ್ದರು. ಇಂದು ಆ ವಿಡಿಯೋವನ್ನು ದಂಪತಿ ಶೇರ್ ಮಾಡಿದ್ದಾರೆ.
ಇದೇ ಏಪ್ರಿಲ್ 7ರಂದು ರಣ್ವಿತ್ ಶೆಟ್ಟಿ ಅವರ 4ನೇ ಜನ್ಮದಿನ ಆಚರಿಸಲಾಗಿತ್ತು. ಅಂದು ಪುತ್ರನ ನಾಲ್ಕು ವರ್ಷಗಳ ಕೆಲ ಕ್ಷಣಗಳನ್ನು ಒಟ್ಟುಗೂಡಿಸಿ ಸುಂದರ ವಿಡಿಯೋವೊಂದನ್ನು ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಂಪತಿ ಹಂಚಿಕೊಂಡಿದ್ದರು. 'ನಮ್ಮ ಪ್ರೀತಿಯ ಮಗನಿಗೆ ನಾಲ್ಕನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು..' ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದರು. ಡಿವೈನ್ ಸ್ಟಾರ್ ಪುತ್ರನಿಗೆ ಅಂದು ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ಇದೀಗ ರಿಷಬ್ ದಂಪತಿ ಮತ್ತೊಂದು ವಿಡಿಯೋ ಹಂಚಿಕೊಂಡಿದೆ. 'ನಮ್ಮ ಮಗನ ಹುಟ್ಟುಹಬ್ಬವನ್ನು ಅವನಿಷ್ಟದ ಗೋವುಗಳೊಂದಿಗೆ ಆಚರಿಸಿದ ಸಂತಸದ ಕ್ಷಣಗಳು' ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ರಿಷಬ್ ಶೆಟ್ಟಿ ಹೆಚ್ಚಾಗಿ ಸಾಂಪ್ರದಾಯಿಕ ನೋಟ ಮತ್ತು ಸಂಸ್ಕೃತಿ ವಿಚಾರವಾಗಿ ಹೆಚ್ಚು ಸದ್ದು ಮಾಡುತ್ತಾರೆ. ಯಾವುದೇ ಸಮಾರಂಭಗಳಿರಲಿ, ಬಿಳಿ ಪಂಚೆ ಧರಿಸುವ ಮೂಲಕ ವಿಶೇಷವಾಗಿ ಗಮನ ಸೆಳೆಯುತ್ತಾರೆ. ಆಗಾಗ್ಗೆ ದೇವಸ್ಥಾನಗಳಿಗೂ ಭೇಟಿ ಕೊಡುತ್ತಿರುತ್ತಾರೆ. ಜೊತೆಗೆ ಸಭೆ ಸಮಾರಂಭಗಳಲ್ಲಿ ಕನ್ನಡ ಮತ್ತು ತುಳು ಭಾಷೆಯನ್ನು ಹೆಚ್ಚಾಗಿ ಬಳಸುತ್ತಾರೆ. ನಟನೆ ಮಾತ್ರವಲ್ಲದೇ ತಮ್ಮ ನಡೆ ನುಡಿಗಳಿಂದಲೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಅಂದ್ರೆ ತಪ್ಪಾಗಲ್ಲ ನೋಡಿ. ಅದರಂತೆ ಮಗನ ನಾಲ್ಕನೇ ವರ್ಷದ ಜನ್ಮದಿನವನ್ನು ಗೋವುಗಳಿಗೆ ಪೂಜೆ ಸಲ್ಲಿಸಿ ಆಚರಿಸಿದ್ದಾರೆ. ಈ ಕಾರ್ಯಕ್ರಮದಲ್ಲೂ ಇಡೀ ಕುಟುಂಬ ಸಾಂಪ್ರದಾಯಿಕ ಲುಕ್ನಿಂದಲೇ ಗಮನ ಸೆಳೆದಿದೆ. ಸಂಸ್ಕೃತಿ ಎತ್ತಿ ಹಿಡಿಯುತ್ತಿರುವ ವಿಚಾರವಾಗಿ ನಟನಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಮಾರ್ಚ್ 4ರಂದು ಕೂಡ ಮಗಳು ರಾದ್ಯಾಳ ಕ್ಯೂಟ್ ವಿಡಿಯೋ ಹಂಚಿಕೊಂಡಿದ್ದರು. "ನಮ್ಮ ಪುಟ್ಟ ರಾಜಕುಮಾರಿ ಬೆಳೆಯುವುದನ್ನು ನೋಡುವುದೇ ಖುಷಿ. ಹ್ಯಾಪಿ ಬರ್ತ್ಡೇ ರಾದ್ಯಾ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ರಾದ್ಯಾಳ ಮೇಲೆ ಸದಾ ಇರಲಿ" ಎಂದು ಬರೆದುಕೊಂಡಿದ್ದರು. ರಾದ್ಯಾಳ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿತ್ತು. ಬಳಿಕ ಚಿತ್ರರಂಗವನ್ನು ಆಹ್ವಾನಿಸಿ, ಗ್ರ್ಯಾಂಡ್ ಬರ್ತ್ ಡೇ ಪಾರ್ಟಿಯನ್ನು ಆಯೋಜಿಸಿದ್ದರು ರಿಷಬ್ ಶೆಟ್ಟಿ.