ಕರ್ನಾಟಕ

karnataka

ETV Bharat / entertainment

ರಿಷಬ್​ - ರಶ್ಮಿಕಾ ಮನಸ್ತಾಪ ವದಂತಿ: ಕಾಂತಾರ ಸ್ಟಾರ್ ಹೇಳಿದ್ದಿಷ್ಟು, ಊಹಾಪೋಹಕ್ಕೆ ಫುಲ್​ ಸ್ಟಾಪ್​ - ರಿಷಬ್​ ಶೆಟ್ಟಿ

ಕಾಂತಾರ ಸ್ಟಾರ್ ರಿಷಬ್​ ಶೆಟ್ಟಿ ಅವರ ಇತ್ತೀಚಿನ ಹೇಳಿಕೆ ನಟಿ ರಶ್ಮಿಕಾ ಮಂದಣ್ಣ ಅವರನ್ನು ಗುರಿಯಾಗಿಸಿದೆ ಎಂಬ ವದಂತಿ ಹರಡಿತ್ತು. ಈ ಬಗ್ಗೆ ಅಭಿಮಾನಿಯೊಬ್ಬರು ಪ್ರತಿಕ್ರಿಸಿದ ಬೆನ್ನಲ್ಲೇ ರಿಷಬ್​ ಶೆಟ್ಟಿ ಸಹ ಟ್ವೀಟ್​ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

Rishabh-Rashmika fight rumours
ರಿಷಬ್​-ರಶ್ಮಿಕಾ ಮನಸ್ತಾಪ ವದಂತಿ

By ETV Bharat Karnataka Team

Published : Dec 1, 2023, 5:54 PM IST

ಸ್ಯಾಂಡಲ್​ವುಡ್​ನಿಂದ ವೃತ್ತಿಜೀವನ ಆರಂಭಿಸಿ ಸದ್ಯ ಬಹುಭಾಷೆಗಳಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಅವರು ಸ್ಯಾಂಡಲ್​ವುಡ್​ ಸ್ಟಾರ್ ಹೀರೋ ರಕ್ಷಿತ್ ಶೆಟ್ಟಿ ಅವರೊಂದಿಗಿನ ನಿಶ್ಚಿತಾರ್ಥ ರದ್ದುಗೊಳಿಸಿದ ನಂತರ ಮತ್ತು ಕನ್ನಡ ಚಿತ್ರರಂಗದ ಹೊರಗಿನ ಭಾಷೆಗಳಲ್ಲಿ ತಮ್ಮ ವೃತ್ತಿಜೀವನವನ್ನು ವಿಸ್ತರಿಸಿದ ಹಿನ್ನೆಲೆ ಹಲವರ ಟೀಕೆಗೆ ಗುರಿಯಾಗಿದ್ದಾರೆ. ನಟಿಯನ್ನು ಪ್ರೀತಿಸುವವರ ಸಂಖ್ಯೆ ಕೂಡ ಹೆಚ್ಚೇ ಇದೆ.

ಗೀತಾ ಗೋವಿಂದಂನಂತಹ ಪ್ರಾಜೆಕ್ಟ್‌ಗಳ ಯಶಸ್ಸಿನ ಹೊರತಾಗಿಯೂ, ರಶ್ಮಿಕಾ ಮಂದಣ್ಣ ಕನ್ನಡ ಚಲನಚಿತ್ರಗಳಿಗಿಂತ ಇತರ ಭಾಷೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ ಎಂದು ಕೆಲವರು ನಟಿಯನ್ನು ಗುರುಯಾಗಿಸಿ ಟೀಕಿಸೋದುಂಟು. ಅಲ್ಲದೇ ರಶ್ಮಿಕಾ ಮಂದಣ್ಣ ಮತ್ತು ರಿಷಬ್ ಶೆಟ್ಟಿ ನಡುವೆ ಬಿರುಕು ಮೂಡಿದೆ ಎಂಬ ಊಹಾಪೋಹಗಳೂ ಎದ್ದಿವೆ. ರಿಷಬ್​ ಶೆಟ್ಟಿ ರಶ್ಮಿಕಾ ಮಂದಣ್ಣ ಅವರ ಚೊಚ್ಚಲ ಚಿತ್ರ ಕಿರಿಕ್ ಪಾರ್ಟಿಯನ್ನು ನಿರ್ದೇಶಿಸಿದ್ದರು. ಯಾವಾಗ ರಕ್ಷಿತ್ ಶೆಟ್ಟಿ ಅವರೊಂದಿಗಿನ ನಿಶ್ಚಿತಾರ್ಥ ಮುರಿದು ಬಿತ್ತೋ, ಎಂದು ಕನ್ನಡಕ್ಕಿಂತ ಹೆಚ್ಚಾಗಿ ಪರಭಾಷೆಗಳಲ್ಲಿ ಕೆಲಸ ಮಾಡಲು ಶುರು ಮಾಡಿದ್ರೋ ಆ ಸಂದರ್ಭದಿಂದಲೂ ರಶ್ಮಿಕಾ ಮಂದಣ್ಣ ಮತ್ತು ರಿಷಬ್ ಶೆಟ್ಟಿ ನಡುವೆ ಬಿರುಕು ಮೂಡಿದೆ, ಮನಸ್ತಾಪಗಳಿವೆ ಎಂಬ ವದಂತಿಗಳು ಹರಡುತ್ತಿವೆ.

ಇತ್ತೀಚೆಗಷ್ಟೇ 'IFFI 2023'ರ ಪತ್ರಿಕಾಗೋಷ್ಠಿಯಲ್ಲಿ ನಟ ರಿಷಬ್ ಶೆಟ್ಟಿ ಮಾತನಾಡಿದ್ದು, ವದಂತಿ ಉಲ್ಪಣಗೊಂಡಿವೆ. ರಿಷಬ್​ ಶೆಟ್ಟಿ ಮಾತನಾಡುವ ವೇಳೆ, ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಸಾಧಿಸಿ ನಂತರ ಚಿತ್ರರಂಗವನ್ನು ತೊರೆಯುವ ವ್ಯಕ್ತಿಯಾಗಬಾರದು ಎಂಬ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದು ನಟನ ಸ್ವಂತ ಅಭಿಪ್ರಾಯವೇ ಹೊರತು, ಯಾರನ್ನೋ ಗುರಿಯಾಗಿಸಿ ಹೇಳಿರಲಿಲ್ಲ. ಆದರೆ ನಟಿ ರಶ್ಮಿಕಾ ಮಂದಣ್ಣ ಅವರ ವೃತ್ತಿಜೀವನವನ್ನು ಗಮನದಲ್ಲಿಟ್ಟುಕೊಂಡು ರಿಷಬ್​ ಶೆಟ್ಟಿ ಪರೋಕ್ಷವಾಗಿ ಟೀಕಿಸಿದ್ದಾರೆ ಎಂದು ಅನೇಕರು ಊಹಿಸಿದ್ದರು. ಇದನ್ನು 'ಮುಸುಕಿನ ಜಗಳ' ಎಂದೂ ಕೂಡ ಹಲವರು ವ್ಯಾಖ್ಯಾನಿಸಿದ್ದರು.

ಇದನ್ನೂ ಓದಿ:100 ಕೋಟಿಯತ್ತ ರಶ್ಮಿಕಾ ಸಿನಿಮಾ: ರಣ್​​ಬೀರ್​​ ವೃತ್ತಿಜೀವನದಲ್ಲಿ ಹೊಸ ದಾಖಲೆ ಸೃಷ್ಟಿಗೆ 'ಅನಿಮಲ್'​ ಸಜ್ಜು!

ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಯೊಬ್ಬರು ಡಿವೈನ್​ ಸ್ಟಾರ್ ರಿಷಬ್​ ಶೆಟ್ಟಿ ಅವರ ವಿಡಿಯೋವನ್ನು ('IFFI 2023'ರ ಪತ್ರಿಕಾಗೋಷ್ಠಿಯ ಕ್ಷಣ) ಹಂಚಿಕೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಿಷಬ್ ಶೆಟ್ಟಿ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಈ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದರು. ಅಭಿಮಾನಿಯ ಈ ಪೋಸ್ಟ್ ಅನ್ನು ಸ್ವತಃ ರಿಷಬ್​ ಶೆಟ್ಟಿ ಅವರೇ ತಮ್ಮ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡು, ''ಪರವಾಗಿಲ್ಲ, ಅಂತಿಮವಾಗಿ ನನ್ನ ಹೇಳಿಕೆಯ ಉದ್ದೇಶವನ್ನು ಅರ್ಥಮಾಡಿಕೊಂಡರು'' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಹೇಳಿಕೆಗಳು ರಶ್ಮಿಕಾ ಮಂದಣ್ಣ ಅವರನ್ನು ಗುರಿಯಾಗಿರಿಸಿಕೊಂಡಿರಲಿಲ್ಲ ಎಂಬುದನ್ನು ರಿಷಬ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಂಗನಾ : ವದಂತಿಗೆ ನಟಿ ಕೊಟ್ಟ ಸ್ಪಷ್ಟನೆಯಿದು!

ABOUT THE AUTHOR

...view details